ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Crime

ಮಕ್ಕಳಿಗೆ ಬೈಕ್ ಕೊಟ್ಟರೆ ಪೋಷಕರಿಗೆ ದಂಡ!

Pakka News Web • 8 ಆಗಸ್ಟ್ 2026,

ಇಂದಿನ ತಲೆಮಾರಿನ ಮಕ್ಕಳಿಗೆ ಬೈಕ್ ಓಡಿಸುವುದೆಂದರೆ ಅದೊಂದು ದೊಡ್ಡ ಸಂಭ್ರಮ. ಎಕ್ಸಾಮ್ ಮುಗಿಯಿತು, ಶಾಲೆಗೆ ರಜೆ ಸಿಕ್ಕಿತು ಅಥವಾ ಅಂಗಡಿಗೆ ಹೋಗಿ ಬರ್ತೇನೆ ಅಂತ ಕೇಳಿದ ತಕ್ಷಣ ಹೆತ್ತವರು ಪ್ರೀತಿಯಿಂದಲೋ, ಅತಿಯಾದ ಮುದ್ದಿನಿಂದಲೋ ಕೈಗೆ ಬೈಕ್ ಕೀ ಕೊಟ್ಟುಬಿಡುತ್ತಾರೆ. 

ಆದರೆ, ಈ ಸಣ್ಣ ನಿರ್ಲಕ್ಷ್ಯವೇ ನಿಮ್ಮನ್ನು ಕೋರ್ಟ್, ಪೊಲೀಸ್ ಠಾಣೆ ಹತ್ತುವಂತೆ ಮಾಡಬಹುದು ಎನ್ನುವುದಕ್ಕೆ ಭಟ್ಕಳದಲ್ಲಿ ನಡೆದ ಈ ಘಟನೆಯೇ ಕನ್ನಡಿ ಹಿಡಿದಿದೆ.

ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ಚಲಾಯಿಸಲು ಕೊಟ್ಟಿದ್ದೇ ತಡ, ಭಟ್ಕಳದ ಇಬ್ಬರು ವಾಹನ ಮಾಲೀಕರಿಗೆ ಈಗ ತಲಾ 25,000 ರೂ. ದಂಡ ಬಿದ್ದಿದೆ! ಭಟ್ಕಳ ಹಿರಿಯ ಸಿವಿಲ್ ನ್ಯಾಯಾಲಯ ನೀಡಿದ ಈ ತೀರ್ಪು ಪ್ರತಿಯೊಬ್ಬ ಪೋಷಕರ ಕಣ್ಣು ತೆರೆಸುವಂತಿದೆ.

ತಗ್ಗರಗೋಡಿನ ಮೆಹಬೂಬ್ ಅಲಿ ಮತ್ತು ಹೆಬಳೆಯ ಅಬ್ದುಲ್ಲಾ ಎಂಬುವವರು ಅಪ್ರಾಪ್ತರಿಗೆ ದ್ವಿಚಕ್ರ ವಾಹನ ನೀಡಿದ್ದಕ್ಕಾಗಿ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ಭರಮಪ್ಪ ಬೆಳಗಲಿ ಅವರು ಮೋಟಾರು ವಾಹನ ಕಾಯ್ದೆಯಡಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, ಇದು ಕ್ಷಮಿಸಲಾರದ ಅಪರಾಧ ಎಂದು ಪರಿಗಣಿಸಿ ಭಾರಿ ದಂಡ ವಿಧಿಸಿದೆ.

ಪೋಷಕರೇ, ನೆನಪಿಡಿ… ‘ನಮ್ಮ ಹುಡುಗ ಚೆನ್ನಾಗಿ ಬೈಕ್ ಓಡಿಸ್ತಾನೆ’ ಎಂಬ ಅತಿಯಾದ ಆತ್ಮವಿಶ್ವಾಸ ಅಥವಾ ಹೆಮ್ಮೆ ನಿಮ್ಮ ಜೇಬಿಗೆ ಕನ್ನ ಹಾಕುವುದಷ್ಟೇ ಅಲ್ಲ, ಮಗನ ಭವಿಷ್ಯಕ್ಕೂ ಕಪ್ಪುಚುಕ್ಕೆಯಾಗಬಹುದು. ಅಪ್ರಾಪ್ತರು ರಸ್ತೆಯಲ್ಲಿ ಮಾಡುವ ಒಂದು ಸಣ್ಣ ತಪ್ಪಿಗೂ ಅವರ ಹೆತ್ತವರೇ ಸಂಪೂರ್ಣ ಹೊಣೆಯಾಗುತ್ತಾರೆ.

ಇದೀಗ ಪೊಲೀಸ್ ಇಲಾಖೆ ಅತ್ಯಂತ ಖಡಕ್ ಮುನ್ನೆಚ್ಚರಿಕೆ ನೀಡಿದೆ ಅಪ್ರಾಪ್ತರಿಗೆ ವಾಹನ ಕೊಡುವ ಪೋಷಕರು ಮತ್ತು ಮಾಲೀಕರ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ಇನ್ಮುಂದೆಯೂ ಕಠಿಣ ಕಾನೂನು ಕ್ರಮ ಮುಂದುವರಿಯಲಿದೆ. ಮಕ್ಕಳಿಗೆ ಬೈಕ್ ಕೀ ಕೊಟ್ಟು ಅವರ ಜೀವ ಹಾಗೂ ನಿಮ್ಮ ಶಾಂತಿಯನ್ನು ಅಪಾಯಕ್ಕೆ ಸಿಲುಕಿಸಬೇಡಿ. ಮಕ್ಕಳು ಚಾಲನಾ ಪರವಾನಗಿ (Driving License) ಪಡೆಯುವ ವಯಸ್ಸಾಗುವವರೆಗೆ ಕಾಯುವುದು ಪ್ರತಿಯೊಬ್ಬ ಜವಾಬ್ದಾರಿಯುತ ಪೋಷಕರ ಕರ್ತವ್ಯ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250