ಕರ್ತವ್ಯ ನಿರತ ಪೊಲೀಸರ ಮೇಲೆ ಮಾರಣಾಂತಿ ಹಲ್ಲೆ ನಡೆದಿದ್ದು ಈ ಬಗ್ಗೆ ಐವರ ವಿರುದ್ಧ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ರಾಷ್ಟ್ರೀಯ ಹೆದ್ದಾರಿ 66ರ ಸರ್ವಿಸ್ ರಸ್ತೆಯ ಪ್ರಜಾ ಜ್ಯೂಸ್ ಸೆಂಟರ್ ಎದುರು ಗಲಾಟೆ ಬಿಡಿಸಲು ತೆರಳಿದ್ದ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರ ಮೇಲೆ ಮಾರಕ ಆಯುಧಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ಆಗಸ್ಟ್ 8ರ ಮಧ್ಯರಾತ್ರಿ ನಡೆದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಐವರು ಪ್ರಮುಖ ಆರೋಪಿಗಳು ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.
ಮುರುಡೇಶ್ವರ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ವಿನಾಯಕ ಶೆಟ್ಟಿ ಅವರು ನೀಡಿರುವ ದೂರಿನ ಪ್ರಕಾರ, ಆಗಸ್ಟ್ 8ರ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದಾಗ ಮುರುಡೇಶ್ವರ ನಾಕಾ ಬಳಿ ಗಲಾಟೆ ನಡೆಯುತ್ತಿರುವ ಬಗ್ಗೆ ಹೆಡ್ ಕಾನ್ಸ್ಟೇಬಲ್ ಸಂಗಪ್ಪ ಕರೆ ಮಾಡಿ ತಿಳಿಸಿದ್ದರು. ತಕ್ಷಣವೇ ಇಬ್ಬರೂ ಸಿಬ್ಬಂದಿ ಸ್ಥಳಕ್ಕೆ ತಲುಪಿದಾಗ, ಆರೋಪಿಗಳಾದ ರಾಜು ನಾಯ್ಕ, ಪೃಥ್ವಿಕ್ ನಾಯ್ಕ, ಮದನ ನಾಯ್ಕ, ಯೋಗೇಶ ನಾಯ್ಕ, ದರ್ಶನ ಹಾಗೂ ಇತರರು ಕಾನೂನುಬಾಹಿರವಾಗಿ ಗುಂಪುಗೂಡಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದರು.
ಆ ಸಂದರ್ಭದಲ್ಲಿ ಆರೋಪಿಗಳು ಮನೋಜ್ ನಾಯ್ಕ ಎಂಬಾತನಿಗೆ ಚಾಕುವಿನಿಂದ ಇರಿಯಲು ಯತ್ನಿಸಿದಾಗ, ಅದನ್ನು ತಡೆಯಲು ಪೊಲೀಸರು ಮಧ್ಯಪ್ರವೇಶಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಆರೋಪಿಗಳು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವರ ಮೇಲೆಯೇ ಕೊಲೆ ಮಾಡುವ ಉದ್ದೇಶದಿಂದ ದಾಳಿ ನಡೆಸಿದ್ದಾರೆ.
ಆರೋಪಿ ಪೃಥ್ವಿಕ್ ನಾಯ್ಕ ಎಂಬಾತ ತನ್ನ ಕೈಯಲ್ಲಿದ್ದ ಚಾಕುವಿನಿಂದ ಕಾನ್ಸ್ಟೇಬಲ್ ವಿನಾಯಕ ಶೆಟ್ಟಿ ಅವರ ಎಡ ಅಂಗೈಗೆ ಇರಿದು ಗಾಯಗೊಳಿಸಿದರೆ, ಇನ್ನೊಬ್ಬ ಆರೋಪಿ ರಾಜು ನಾಯ್ಕ ಎಂಬಾತ ಹೆಡ್ ಕಾನ್ಸ್ಟೇಬಲ್ ಸಂಗಪ್ಪ ಹರಿಜನ ಅವರ ಬಲಗೈ ಮೇಲ್ಭಾಗಕ್ಕೆ ಚಾಕುವಿನಿಂದ ಬಲವಾಗಿ ಇರಿದು ತೀವ್ರ ಗಾಯಗೊಳಿಸಿದ್ದಾನೆ.
ಹಲ್ಲೆಯ ನಂತರ ಆರೋಪಿಗಳು ಪೊಲೀಸರಿಗೆ ಅಶ್ಲೀಲವಾಗಿ ಬೈದು, ಇನ್ನೊಮ್ಮೆ ತಮ್ಮ ವಿಷಯಕ್ಕೆ ಬಂದರೆ ಜೀವಂತ ಬಿಡುವುದಿಲ್ಲವೆಂದು ಬೆದರಿಕೆ ಹಾಕಿ, ಬಿಳಿ ಬಣ್ಣದ ಸ್ವಿಫ್ಟ್ ಕಾರಿನಲ್ಲಿ (ಸಂಖ್ಯೆ: KA-47/N-1614) ಸ್ಥಳದಿಂದ ಪರಾರಿಯಾಗಿದ್ದಾರೆ.
ಗಾಯಗೊಂಡ ಸಿಬ್ಬಂದಿಗೆ ಆರ್.ಎನ್.ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ವಿನಾಯಕ ಶೆಟ್ಟಿ ನೀಡಿದ ದೂರಿನನ್ವಯ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖಾ ಪಿ.ಎಸ್.ಐ ಲೋಕನಾಥ ರಾಠೋಡ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದು, ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
