ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಂಕಿ ಮೂಲದ ತಾಯಿ ಹಾಗೂ ಆಕೆಯ ಐದು ವರ್ಷದ ಪುತ್ರಿ ನಾಪತ್ತೆಯಾಗಿದ್ದು ಭಟ್ಕಳ ಪೊಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇವರ ಪತ್ತೆಗಾಗಿ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಸಾರ್ವಜನಿಕರ ಸಹಕಾರ ಕೋರಿದ್ದಾರೆ. ಕಾಣೆಯಾದವರ ಚಹರೆ ಹಾಗೂ ವಿವರಗಳನ್ನು ಬಿಡುಗಡೆ ಮಾಡಿರುವ ಪೊಲೀಸರು, ಯಾವುದೇ ಸುಳಿವು ಸಿಕ್ಕ ತಕ್ಷಣವೇ ಠಾಣೆಗೆ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
ನಾಪತ್ತೆಯಾದವರನ್ನು ಮಂಕಿ ನಿವಾಸಿ ಫಾತಿಮಾ ಸಮ್ರೀನ್ ಮೊಹಮ್ಮದ ಅಬ್ಬಾಸ ಕುರ್ಡಿ (31 ವರ್ಷ) ಹಾಗೂ ಅವರ ಪುತ್ರಿ ಜುಲೇಖಾ ಪರ್ವಿನ (5 ವರ್ಷ) ಎಂದು ಗುರುತಿಸಲಾಗಿದೆ. 4.8 ಅಡಿ ಎತ್ತರ ಹೊಂದಿರುವ ಫಾತಿಮಾ ಅವರು ಗೋಧಿ ಮೈಬಣ್ಣ, ದುಂಡನೆಯ ಮುಖ ಮತ್ತು ಸಾಧಾರಣ ಮೈಕಟ್ಟು ಹೊಂದಿದ್ದು, ಮನೆಯಿಂದ ತೆರಳುವಾಗ ಚೂಡಿದಾರ ಹಾಗೂ ಕಪ್ಪು ಬಣ್ಣದ ಬುರ್ಖಾ ಧರಿಸಿದ್ದರು.
ಇವರು ಉರ್ದು, ಕನ್ನಡ, ನವಾಯಿತಿ ಮತ್ತು ಹಿಂದಿ ಭಾಷೆಗಳನ್ನು ಮಾತನಾಡಬಲ್ಲವರಾಗಿದ್ದಾರೆ. ಇನ್ನು 2.5 ಅಡಿ ಎತ್ತರದ ಪುತ್ರಿ ಜುಲೇಖಾ ಪರ್ವಿನ ಕೂಡ ಗೋಧಿ ಮೈಬಣ್ಣ ಹಾಗೂ ಸಾಧಾರಣ ಮೈಕಟ್ಟು ಹೊಂದಿದ್ದು, ಮನೆಯಿಂದ ಹೋಗುವಾಗ ಫ್ರಾಕ್ ಮತ್ತು ಲೆಗಿನ್ಸ್ ಧರಿಸಿದ್ದಾಳೆ. ಈ ಮಗು ಉರ್ದು ಹಾಗೂ ಹಿಂದಿ ಭಾಷೆಗಳನ್ನು ಮಾತನಾಡುತ್ತದೆ.
ಈ ಮೇಲಿನ ಚಹರೆಗಳನ್ನು ಹೋಲುವ ತಾಯಿ ಮತ್ತು ಮಗಳು ಎಲ್ಲಾದರೂ ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣವೇ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ (ದೂರವಾಣಿ ಸಂಖ್ಯೆ: 08385-227333) ಅಥವಾ ಪಿಎಸ್ಐ ಭಟ್ಕಳ ಗ್ರಾಮೀಣ ಠಾಣೆ (ಮೊಬೈಲ್ ಸಂಖ್ಯೆ: 9480805252) ಯನ್ನು ಸಂಪರ್ಕಿಸಬಹುದು.
ಅಷ್ಟೇ ಅಲ್ಲದೆ, ಕಾರವಾರ ಪೊಲೀಸ್ ಕಂಟ್ರೋಲ್ ರೂಂ (ದೂರವಾಣಿ ಸಂಖ್ಯೆ: 08382-226550 / 112 / 100) ನ್ನು ನೇರವಾಗಿ ಸಂಪರ್ಕಿಸಿ ಮಾಹಿತಿ ನೀಡಬಹುದಾಗಿದೆ ಎಂದು ಭಟ್ಕಳ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.

.
