ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Crime

ಮಗನ ಅಪಘಾತದ ಬೆನ್ನಲ್ಲೇ ದಂಪತಿಗಳ ಅಂತ್ಯ!

Pakka News Web • 11 ಆಗಸ್ಟ್ 2026,

ಬದುಕಿನ ಹಾದಿಯಲ್ಲಿ ಎದುರಾದ ಸಣ್ಣದೊಂದು ದುರಂತ, ಇಡೀ ಕುಟುಂಬವನ್ನೇ ಸರ್ವನಾಶ ಮಾಡಿದ ಘಟನೆಯೊಂದು ಕಾರವಾರ ತಾಲೂಕಿನ ಶಿರವಾಡದ ಬಂಗಾರಪ್ಪ ನಗರದಲ್ಲಿ ಸಂಭವಿಸಿದೆ.

ಮಗನ ಆರೋಗ್ಯದ ಕುರಿತಾದ ತೀವ್ರ ಚಿಂತೆಯಿಂದ ಮನನೊಂದು ತಾಯಿ ಆತ್ಮಹತ್ಯೆಗೆ ಶರಣಾದರೆ, ಪತ್ನಿಯ ಅಗಲಿಕೆ ತಾಳಲಾರದೆ ಪತಿಯೂ ಕಾಳಿ ನದಿಗೆ ಜಿಗಿದು ಪ್ರಾಣ ಬಿಟ್ಟಿರುವ ಕರುಣಾಜನಕ ಜನತೆಯನ್ನು ಕಣ್ಣೀರಿನಲ್ಲಿ ಮುಳುಗಿಸಿದೆ.

ಶಿರವಾಡದ ಬಂಗಾರಪ್ಪನಗರದ ನಿವಾಸಿಗಳಾದ ವೆಂಕಟೇಶ ವಡ್ಡರ (38) ಹಾಗೂ ವಿಜಯಾ ವಡ್ಡರ (36) ದಂಪತಿಯ 1೦ ವರ್ಷದ ಮಗ ಶರತ್, ಒಂದು ವಾರದ ಹಿಂದೆ ಬೈಕ್‌ನಿಂದ ಬಿದ್ದು ತಲೆಗೆ ತೀವ್ರ ಗಾಯ ಮಾಡಿಕೊಂಡಿದ್ದನು. ಬಾಲಕನಿಗೆ ತಲೆಯ ಶಸ್ತ್ರಚಿಕಿತ್ಸೆ ನಡೆಸಿ, ಭಾಗಶಃ ಮೂಳೆಯನ್ನು ತೆಗೆದಿದ್ದ ವೈದ್ಯರು, ಆತನಿಗೆ 18 ವರ್ಷ ತುಂಬಿದ ನಂತರ ಮತ್ತೊಮ್ಮೆ ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದರು.

ಮಗನ ಈ ಸ್ಥಿತಿಯನ್ನು ಕಂಡು ಕಂಗಾಲಾಗಿದ್ದ ತಾಯಿ ವಿಜಯಾ, ತೀವ್ರ ಖಿನ್ನತೆಗೆ ಒಳಗಾಗಿದ್ದರು. ಕುಟುಂಬಸ್ಥರು ಎಷ್ಟೇ ಧೈರ್ಯ ತುಂಬಿದರೂ ಅವರು ಚೇತರಿಸಿಕೊಳ್ಳಲಿಲ್ಲ. ಕೊನೆಗೆ ಆಗಸ್ಟ್ 9 ರ ರಾತ್ರಿ, ತಮ್ಮ ಮನೆಯ ಮೇಲ್ಛಾವಣಿಯ ಕಂಬಕ್ಕೆ ನೇಣು ಬಿಗಿದುಕೊಂಡಿದ್ದಾರೆ. ಕೂಡಲೇ ಅವರನ್ನು ಕಾರವಾರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದರು.

ನಾನೂ ಸಾಯುತ್ತೇನೆ ಎಂದಿದ್ದ ಪತಿ ಕಾಳಿ ನದಿಯಲ್ಲಿ ಶವವಾಗಿ ಪತ್ತೆ!

ಪತ್ನಿ ಮೃತಪಟ್ಟ ಸುದ್ದಿ ಕೇಳುತ್ತಿದ್ದಂತೆಯೇ ಆಘಾತಕ್ಕೊಳಗಾದ ಪತಿ ವೆಂಕಟೇಶ, ನಾನೂ ಸಾಯುತ್ತೇನೆ ಎಂದು ಚೀರಿ ಆಸ್ಪತ್ರೆಯಿಂದ ಓಡಿ ಹೋಗಿ ನಾಪತ್ತೆಯಾಗಿದ್ದರು. ಪತ್ನಿಯನ್ನು ಕಳೆದುಕೊಂಡ ದುಃಖ ಹಾಗೂ ಮಗನ ಭವಿಷ್ಯದ ಚಿಂತೆಯಿಂದ ಕಂಗೆಟ್ಟಿದ್ದ ವೆಂಕಟೇಶ, ಕೊಡಿಭಾಗದ ಬಳಿ ಕಾಳಿ ನದಿಗೆ ಜಿಗಿದಿದ್ದರು.

ಮಂಗಳವಾರ ಕಾರವಾರದ ತಾಲೂಕಿನ ಅಳೇವಾಡ-ಕೋಡಿಭಾಗ ಪ್ರದೇಶದಲ್ಲಿ ನೀರಿನಲ್ಲಿ ಅಪರಿಚಿತ ವ್ಯಕ್ತಿಯ ಶವವೊಂದು ತೇಲುತ್ತಿರುವುದನ್ನು ಕಂಡು ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ಸ್ಥಳಕ್ಕೆ ಧಾವಿಸಿದ ಕರಾವಳಿ ಕಾವಲು ಪಡೆಯ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರು ಶವವನ್ನು ಮೇಲಕ್ಕೆತ್ತಿದಾಗ, ಅದು ನಾಪತ್ತೆಯಾಗಿದ್ದ ವೆಂಕಟೇಶ ವಡ್ಡರ ಅವರದ್ದೇ ಶವ ಎಂಬುದು ದೃಢಪಟ್ಟಿದೆ.

ಮಗನ ಜೀವ ಉಳಿಸಲು ವೈದ್ಯರು ಹರಸಾಹಸ ಪಡುತ್ತಿರುವ ನಡುವೆಯೇ, ಆತನಿಗೆ ಆಸರೆಯಾಗಬೇಕಿದ್ದ ತಾಯಿ ಹಾಗೂ ತಂದೆ ಇಬ್ಬರೂ ಕೆಲವೇ ದಿನಗಳ ಅಂತರದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 10 ವರ್ಷದ ಪುಟ್ಟ ಬಾಲಕ ಶರತ್, ಈಗ ಹೆತ್ತವರಿಲ್ಲದೆ ತೀವ್ರ ಸಂಕಷ್ಟದಲ್ಲಿದ್ದಾನೆ. 

ಈ ಘಟನೆಗೆ ಸಂಬಂಧಿಸಿದಂತೆ ಮೃತರ ತಾಯಿ ರತ್ನ ಕಡಪತಿ ಅವರು ನೀಡಿದ ದೂರಿನ ಮೇರೆಗೆ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250