ಅಂಕೋಲಾ: ಮನೆಯ ಹಿಂಭಾಗದಲ್ಲಿರುವ ಗೋದಾಮಿನ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಸುಮಾರು 71 ಕೆ.ಜಿ. ತೂಕದ ಮೂರು ಅಡಿಕೆ ತುಂಬಿದ ಚೀಲಗಳನ್ನು ಕಳವು ಮಾಡಿಕೊಂಡು ಹೋಗಿರುವ ಘಟನೆ ಅಂಕೋಲಾ ತಾಲೂಕಿನ ಪುನರ್ವಸತಿ ಕೇಂದ್ರ ಹಳವಳ್ಳಿಯಲ್ಲಿ ನಡೆದಿದೆ.
ಹಳವಳ್ಳಿ ನಿವಾಸಿ, ಕೃಷಿ ಕೆಲಸ ಮಾಡಿಕೊಂಡಿರುವ ರಾಮಕೃಷ್ಣ ತಂದೆ ನರಸಿಂಹ ಹರಿಮನೆ (45) ಅವರು ಈ ಕುರಿತು ಅಂಕೋಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮನೆಯ ಹಿಂಭಾಗದಲ್ಲಿದ್ದ ಗೋಡೌನ್‌ನ ಬಾಗಿಲಿನ ದಂಡಿಯನ್ನು ಬಾಗಿಸಿ ಒಳನುಗ್ಗಿದ ಕಳ್ಳರು ಕೋಣೆಯಲ್ಲಿದ್ದ ಅಡಿಕೆ ತುಂಬಿದ ಮೂರು ಚೀಲಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.
ಕಳುವಾದ ಅಡಿಕೆಯ ಅಂದಾಜು 90 ಸಾವಿರ ರೂ. ಮೌಲ್ಯದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿದಿದೆ.
