ಯಲ್ಲಾಪುರ: ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದೀಗ ಎರಡು ವರ್ಷದ ಪುಟ್ಟ ಮಗುವಿನ ಮೇಲೆಯೇ ನಾಯಿ ದಾಳಿ ನಡೆಸಿರುವ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಮನೆ ಅಂಗಳದಲ್ಲೇ ಆಟವಾಡುತ್ತಿದ್ದ ಮಗುವಿನ ಮುಖಕ್ಕೆ ನಾಯಿ ಕಚ್ಚಿದ್ದು, ಗಂಭೀರ ಗಾಯಗೊಂಡ ಬಾಲಕಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಕರೆದೊಯ್ಯಲಾಗಿದೆ.
ಯಲ್ಲಾಪುರದ ಕಾಳಮ್ಮ ನಗರ ಹಾಗೂ ಆಶ್ರಯ ಕಾಲೋನಿ ಪ್ರದೇಶದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಮುನ್ನಾ ಬೈಕ್ ಗ್ಯಾರೇಜ್ ಮಾಲಕ ಮುನ್ನಾ ಅವರ ಎರಡು ವರ್ಷದ ಪುತ್ರಿ ಮನೆ ಅಂಗಳದಲ್ಲಿ ಆಟವಾಡುತ್ತಿದ್ದ ವೇಳೆ ಏಕಾಏಕಿ ನಾಯಿ ದಾಳಿ ನಡೆಸಿದೆ ಎನ್ನಲಾಗಿದೆ. ಮಗು ಅಳುತ್ತಿರುವುದನ್ನು ಗಮನಿಸಿದ ಪಾಲಕರು ಹೊರಗೆ ಬಂದು ನೋಡಿದಾಗ, ಬಾಲಕಿಯ ಮುಖದ ಮೇಲೆ ಗಂಭೀರ ಗಾಯವಾಗಿರುವುದು ಕಂಡುಬಂದಿದೆ.
ತಕ್ಷಣ ಬಾಲಕಿಯನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಮುಖದ ಮೇಲಿನ ಗಾಯದ ತೀವ್ರತೆಯನ್ನು ಪರಿಗಣಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸದ್ಯ ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದು, ಮುಖಕ್ಕೆ ಉಂಟಾಗಿರುವ ಗಾಯ ಸಂಪೂರ್ಣವಾಗಿ ಗುಣಪಡಿಸುವುದು ಕುಟುಂಬದ ಮುಂದಿರುವ ಪ್ರಮುಖ ಸವಾಲಾಗಿದೆ.
ಇದೇ ಪ್ರದೇಶದಲ್ಲಿ ಈಗಾಗಲೇ ನಾಲ್ವರು ಸೇರಿದಂತೆ ಹಲವು ಮಂದಿಗೆ ಬೀದಿ ನಾಯಿಗಳು ಕಚ್ಚಿರುವ ದೂರುಗಳು ಕೇಳಿಬಂದಿವೆ. ಮನೆ ಅಂಗಳ, ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಾಯಿಗಳ ಗುಂಪುಗಳು ಓಡಾಡುತ್ತಿರುವುದರಿಂದ ಮಕ್ಕಳು ಹಾಗೂ ವಯೋವೃದ್ಧರು ಹೊರಗೆ ಓಡಾಡಲು ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಪುಟ್ಟ ಮಗುವಿನ ಮೇಲಿನ ದಾಳಿ ಘಟನೆ ಬಳಿಕವಾದರೂ ನಗರಾಡಳಿತ ಎಚ್ಚೆತ್ತುಕೊಂಡು ಬೀದಿ ನಾಯಿಗಳ ಹಾವಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂಬ ಒತ್ತಾಯ ಸ್ಥಳೀಯರಿಂದ ಕೇಳಿಬಂದಿದೆ. ಕೇವಲ ದೂರು ಬಂದಾಗ ಮಾತ್ರ ಕ್ರಮ ಕೈಗೊಳ್ಳುವ ಬದಲು, ಅಪಾಯಕಾರಿಯಾಗಿ ಸಂಚರಿಸುವ ನಾಯಿಗಳನ್ನು ನಿಯಂತ್ರಿಸುವುದು, ಸಂತಾನ ನಿಯಂತ್ರಣ ಹಾಗೂ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಲಾಗಿದೆ.
ಮನೆಯ ಅಂಗಳದಲ್ಲೇ ಆಟವಾಡುತ್ತಿದ್ದ ಎರಡು ವರ್ಷದ ಮಗುವಿನ ಮೇಲಿನ ದಾಳಿ, ಬೀದಿ ನಾಯಿಗಳ ಸಮಸ್ಯೆ ಎಷ್ಟರ ಮಟ್ಟಿಗೆ ಗಂಭೀರವಾಗಿದೆ ಎಂಬುದನ್ನು ಮತ್ತೊಮ್ಮೆ ಎಚ್ಚರಿಸಿದೆ. ಮತ್ತೊಂದು ಅನಾಹುತ ಸಂಭವಿಸುವ ಮುನ್ನ ಸಂಬಂಧಪಟ್ಟ ಆಡಳಿತ ವರ್ಗ ತುರ್ತು ಕ್ರಮ ಕೈಗೊಳ್ಳಬೇಕಿದೆ.
