ಶಿರಸಿ: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸಿದ ಆರೋಪದ ಮೇರೆಗೆ ಯುವಕನೊಬ್ಬನ ವಿರುದ್ಧ ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ನಗರದ ಕಾಲೇಜು ರಸ್ತೆಯ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣ ಕ್ರಾಸ್ ಬಳಿ ಕೆ.ಎಚ್.ಬಿ. ಕಾಲೋನಿ ನಿವಾಸಿ, ಮೆಕ್ಯಾನಿಕ್ ವೃತ್ತಿಯ ಪರೀಕ್ಷಿತ್ ಶ್ರೀನಿವಾಸ ಪತ್ತಾರ (26) ಗಾಂಜಾ ಸೇವಿಸಿದ ಅಮಲಿನಲ್ಲಿರುವುದು ಪೊಲೀಸರ ಗಮನಕ್ಕೆ ಬಂದಿದೆ ಎನ್ನಲಾಗಿದೆ. ಅನುಮಾನದ ಮೇರೆಗೆ ಆತನನ್ನು ವಶಕ್ಕೆ ಪಡೆದ ಶಿರಸಿ ಹೊಸಮಾರುಕಟ್ಟೆ ಠಾಣೆಯ ಪೊಲೀಸ್ ಉಪನಿರೀಕ್ಷಕಿ ಗೀತಾ ಕಲಘಟಗಿ ಅವರು ಪಂಡಿತ್ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.
ವೈದ್ಯಕೀಯ ಪರೀಕ್ಷೆಯ ವರದಿಯಲ್ಲಿ ಗಾಂಜಾ ಸೇವಿಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ, ಸರ್ಕಾರದ ಪರವಾಗಿ ದೂರು ದಾಖಲಿಸಲಾಗಿದೆ. ಈ ಸಂಬಂಧ ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
