ಕಾರವಾರ:‘ಕೊರೊನಾ ಬಂತು, ಬಾಗಿಲು ಮುಚ್ಚಿದ್ವಿ, ನಷ್ಟವಾಯ್ತು!’ ಅಂತ ಬೊಗಳೆ ಬಿಟ್ಟು ಸರ್ಕಾರದ ಬೊಕ್ಕಸಕ್ಕೆ ಕನ್ನ ಹಾಕುವ ಹೊಸ ಐಡಿಯಾಗಳು ದಿನಕ್ಕೊಂದರಂತೆ ಹುಟ್ಟಿಕೊಳ್ಳುತ್ತಿವೆ. ಇನ್ನು ಮಾಜಾಳಿ ಗ್ರಾಮ ಪಂಚಾಯಿತಿಯಲ್ಲಂತೂ ಪಿಡಿಒ ಹೋಟೆಲ್ ಮಾಲೀಕರಿಗೆ ಬಂಪರ್ ಗಿಫ್ಟ್ ಕೊಟ್ಟು ಸಖತ್ ಸುದ್ದಿಯಲ್ಲಿದ್ದಾರೆ!
ಹೋಟೆಲ್ನವರು ಕಳೆದ ಐದು ವರ್ಷಗಳಿಂದ ಬರೋಬ್ಬರಿ 50 ಸಾವಿರ ತೆರಿಗೆಯನ್ನು ಬಾಕಿ ಉಳಿಸಿಕೊಂಡು ಆರಾಮಾಗಿ ಕುಳಿತಿದ್ದರು. ಕೊನೆಗೆ ಜೇಬಿನಿಂದ ಕಾಸು ಹೊರಹಾಕುವ ಸಮಯ ಬಂದಾಗ ಪಿಡಿಒ ಅವರಿಗೆ ಹೋಟೆಲ್ ಮಾಲೀಕರ ಮೇಲಿನ ದಯೆ ಉಕ್ಕಿ ಬಂದಿದೆ! ತಕ್ಷಣವೇ ‘ಕೋವಿಡ್ ನೆಪ’ ಎಂಬ ಹಳೆಯ ಕಾಲದ ಮಂತ್ರವನ್ನು ಜಪಿಸಿ, ಜುಲೈ ಸಾಮಾನ್ಯ ಸಭೆಯಲ್ಲಿ ಶೇ. 50ರಷ್ಟು ಅಂದರೆ ಬರೋಬ್ಬರಿ 25,000 ರೂ. ರಿಯಾಯಿತಿ ಕೊಡುವ ಠರಾವು ಪಾಸ್ ಮಾಡಿಯೇಬಿಟ್ಟಿದ್ದಾರೆ ಎಂದು ಪಂಚಾಯತ್ ನ ಮಾಜಿ ಸದಸ್ಯ ಚಂದ್ರಹಾಸ ಕೋಠಾರಕರ್ ಮಾಹಿತಿ ನೀಡಿದ್ದಾರೆ. ಹೋಟೆಲ್ ಮಾಲೀಕರೂ ಕೂಡ ಕೇವಲ 25,000 ಕೊಡಲು ಮುಂದಾಗಿದ್ದು, ಪಿಡಿಒ ಅದನ್ನು ತಕ್ಷಣ ಒಪ್ಪಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ.
ಅಲ್ಲಪ್ಪಾ, ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ ಪ್ರಕಾರ ಸರ್ಕಾರದ ಪೂರ್ವಾನುಮತಿ ಅಥವಾ ಉನ್ನತಾಧಿಕಾರಿಗಳ ನಿರ್ದಿಷ್ಟ ನಿಯಮವಿಲ್ಲದೆ ಸಾಮಾನ್ಯ ಸಭೆಯ ಠರಾವಿನ ಮೂಲಕವೇ ವಾಣಿಜ್ಯ ತೆರಿಗೆಯನ್ನು ಹೀಗೆ ಅಪ್ಪನ ಆಸ್ತಿಯಂತೆ ಕಡಿತಗೊಳಿಸಲು ಪಿಡಿಒಗೆ ಅಧಿಕಾರ ಕೊಟ್ಟವರಾರು? ಇದು ಜನಸೇವೆ ಮಾಡುವುದೋ ಅಥವಾ ಖಾಸಗಿ ಹೋಟೆಲ್ ಮಾಲೀಕರ ಉದ್ಧಾರಕ್ಕಾಗಿ ಸರ್ಕಾರಿ ಬೊಕ್ಕಸ ಲೂಟಿ ಮಾಡುವುದೋ ನೀವೇ ಹೇಳಿ!
ಕೋವಿಡ್ ನೆಪವೊಡ್ಡಿ ಸಾರ್ವಜನಿಕ ಹಾಗೂ ಪಂಚಾಯತ್ ಯ ಹಣವನ್ನು ಖಾಸಗಿ ವ್ಯಕ್ತಿಗಳಿಗೆ ಆಡಳಿತ ದುರುಪಯೋಗ ಹಾಗೂ ಭ್ರಷ್ಟಾಚಾರ ನಡೆದಿರುವ ಶಂಕೆ ವ್ಯಕ್ತವಾಗಿದೆ. ಈ ತೆರಿಗೆ ಮನ್ನಾದಿಂದ ಮಾಜಾಳಿ ಗ್ರಾಪಂನ ಸ್ವಂತ ಸಂಪನ್ಮೂಲ ಕ್ರೋಢೀಕರಣಕ್ಕೆ ಹಾಗೂ ಸರ್ಕಾರದ ಆದಾಯಕ್ಕೆ ಭಾರಿ ನಷ್ಟ ಉಂಟಾಗಿದೆ.
ಈ ಆಟವನ್ನು ಕಂಡು ಕಣ್ಣುಕೆಂಪಾಗಿಸಿರುವ ಗ್ರಾಪಂ ಮಾಜಿ ಸದಸ್ಯ ಚಂದ್ರಹಾಸ ದೇವಿದಾಸ ಕೋಠಾರಕರ ಅವರು, ನೇರವಾಗಿ ಜಿಲ್ಲಾ ಪಂಚಾಯತ್ ಸಿಇಒ ಹಾಗೂ ಕಾರವಾರ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರು ನೀಡಿ ಕುರ್ಚಿನಾಡಿಸುವ ಕೆಲಸ ಮಾಡಿದ್ದಾರೆ. ಆ ಜುಲೈ ತಿಂಗಳ ‘ಅಕ್ರಮ ಠರಾವು’ ಕೂಡಲೇ ರದ್ದಾಗಬೇಕು, ಪಿಡಿಒ ಅವರ ಈ ಹೈಡ್ರಾಮಾ ಮೇಲೆ ತನಿಖೆ ನಡೆಸಿ ಇಲಾಖಾ ಶಿಸ್ತುಕ್ರಮ ಕೈಗೊಳ್ಳಬೇಕು ಮತ್ತು ಹೋಟೆಲ್ನಿಂದ ಬರಬೇಕಾದ ಸಂಪೂರ್ಣ 50,000 ತೆರಿಗೆಯನ್ನು ಬಡ್ಡಿ ಸಮೇತ ವಸೂಲಿ ಮಾಡಬೇಕು ಎಂದು ಅವರು ಕಟ್ಟುನಿಟ್ಟಾಗಿ ಒತ್ತಾಯಿಸಿದ್ದಾರೆ.
ಒಟ್ಟಿನಲ್ಲಿ, ಕೊರೊನಾ ಕಾಲ ಮುಗಿದು ವರ್ಷಗಳೇ ಕಳೆದರೂ, ಇನ್ನೂ ಅದೇ ನೆಪ ಹೇಳಿ ತೆರಿಗೆ ಲೂಟಿ ಹೊಡೆಯುತ್ತಿರುವ ಪಿಡಿಒ ಅವರ ಈ ‘ಉದಾರತೆ’ಯನ್ನು ಕಂಡು ಊರಿನ ಜನ ಬಾಯ್ಮೇಲೆ ಬೆರಳಿಟ್ಟುಕೊಳ್ಳುವಂತಾಗಿದೆ!
ಕೊರೊನಾ ಜಪ ಮಾಡಿ, ಹೋಟೆಲ್ ತೆರಿಗೆಗೆ ಕತ್ತರಿ: ಮಾಜಾಳಿ ಪಿಡಿಒಯಿಂದ ಸಖತ್ ಆಫರ್ !
