ಅಕ್ಟೋಬರ್ 24, 2026
ಶನಿವಾರ

ನಮ್ಮನ್ನು ಅನುಸರಿಸಿ

Crime

ಶಿರಸಿಯಲ್ಲಿ ಚಿರತೆಯ 10 ಉಗುರುಗಳ ಅಕ್ರಮ ಸಂಗ್ರಹ: ವ್ಯಕ್ತಿಯ ಬಂಧನ

Pakka News Web • 24 ಆಕ್ಟೋ 2026,

ಶಿರಸಿ: ಚಿರತೆಯ 10 ಉಗುರುಗಳನ್ನು ಅನಧಿಕೃತವಾಗಿ ಸಂಗ್ರಹಿಸಿಟ್ಟಿದ್ದ ಆರೋಪದ ಮೇಲೆ ಶಿರಸಿ ತಾಲೂಕಿನ ವ್ಯಕ್ತಿಯೊಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಶಿರಸಿ ತಾಲೂಕಿನ ಕಲ್ಲಿ ಗ್ರಾಮದ ಅರಣ್ಯ ಸರ್ವೆ ನಂ. 8ಅ ವ್ಯಾಪ್ತಿಯಲ್ಲಿರುವ ಲಕ್ಷ್ಮಣ ಶೇಷಪ್ಪ ನಾಯ್ಕ ಅವರ ಮನೆಯಲ್ಲಿ ಚಿರತೆಯ ಉಗುರುಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ಬಗ್ಗೆ ಅರಣ್ಯ ಇಲಾಖೆಗೆ ಖಚಿತ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 22ರಂದು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದಾಗ, ಚಿರತೆಯ 10 ಉಗುರುಗಳನ್ನು ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 36 ವರ್ಷ ವಯಸ್ಸಿನ, ಶಿರಸಿ ತಾಲೂಕಿನ ಉಂಬಳೇಕೊಪ್ಪ ನಿವಾಸಿ ಲಕ್ಷ್ಮಣ ಶೇಷಪ್ಪ ನಾಯ್ಕ ಅವರನ್ನು ಬಂಧಿಸಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ–1972ರ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, WLOR No. 01/2026-27ರಂತೆ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಂಗ ಪ್ರಕ್ರಿಯೆಗಾಗಿ ಶಿರಸಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಶಿರಸಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಯೋಗೇಶ ಸಿ.ಕೆ. (ಭಾ.ಅ.ಸೇ., ಪ್ರಭಾರ) ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಮಿತ ಚವ್ಹಾಣ ಅವರ ಮಾರ್ಗದರ್ಶನದಲ್ಲಿ, ಬನವಾಸಿ ವಲಯದ ವಲಯ ಅರಣ್ಯಾಧಿಕಾರಿ ಕಾರ್ತೀಕ ಕಂಬಳಿ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು.

ಕಾರ್ಯಾಚರಣೆಯಲ್ಲಿ ಸುಗಾವಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಪ್ರೇಮಕುಮಾರ ಕಾರಭಾರಿ, ಗಸ್ತು ಅರಣ್ಯ ಪಾಲಕರಾದ ಸಂತೋಷ ಕಕ್ಕಳಮೇಲಿ ಮತ್ತು ರವಿ ಜಾಡರ ಹಾಗೂ ಕ್ಷೇಮಾಭಿವೃದ್ಧಿ ದಿನಗೂಲಿ ನೌಕರ ಹೆಚ್.ಎಸ್. ಈಶ್ವರಪ್ಪ ಪಾಲ್ಗೊಂಡಿದ್ದರು.

ಪ್ರಕರಣದ ಕುರಿತು ಅರಣ್ಯ ಇಲಾಖೆ ತನಿಖೆಯನ್ನು ಮುಂದುವರಿಸಿದ್ದು, ಚಿರತೆಯ ಉಗುರುಗಳು ಎಲ್ಲಿಂದ ಬಂದವು ಮತ್ತು ಈ ಪ್ರಕರಣದಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬುದರ ಕುರಿತು ತನಿಖೆಯಿಂದ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250