ಶಿರಸಿ: ರಸ್ತೆ ಡಿವೈಡರ್‌ಗೆ ಆಟೋ ರಿಕ್ಷಾವೊಂದು ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಆಟೋ ಚಾಲಕ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ ಘಟನೆ ಶನಿವಾರ ರಾತ್ರಿ ಶಿರಸಿ ನಗರದಲ್ಲಿ ನಡೆದಿದೆ. ಇಲ್ಲಿನ ಆವೆ ಮರಿಯಾ ಶಾಲೆಯ ಎದುರುಗಡೆ ಈ ದುರ್ಘಟನೆ ಸಂಭವಿಸಿದ್ದು, ಗಣೇಶ ನಗರದ ನಿವಾಸಿ ಮಹೇಶ ಗಾಂವ್ಕರ್ (31) ಮೃತಪಟ್ಟ ದುರ್ದೈವಿ ಚಾಲಕ ಎಂದು ಗುರುತಿಸಲಾಗಿದೆ. ವೇಗವಾಗಿ ಬಂದ ಆಟೋ ರಿಕ್ಷಾ ರಸ್ತೆ ಮಧ್ಯದ ಡಿವೈಡರ್‌ಗೆ ಜೋರಾಗಿ ಅಪ್ಪಳಿಸಿದ ರಭಸಕ್ಕೆ ಈ ಸಾವು ಸಂಭವಿಸಿದೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಶಿರಸಿ ಸಂಚಾರಿ ಪೊಲೀಸ್ ಠಾಣೆಯ ಪಿಎಸ್‌ಐ ದೇವೇಂದ್ರ ನಾಯ್ಕ್ ಹಾಗೂ ಸಿಬ್ಬಂದಿಗಳು ತಕ್ಷಣವೇ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿ, ಅಪಘಾತಕ್ಕೀಡಾದ ವಾಹನವನ್ನು ತೆರವುಗೊಳಿಸುವ ಮೂಲಕ ಸಾರ್ವಜನಿಕ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
