ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Crime

ಲೈಕ್ಸ್ ಗಳಿಸಲು ವ್ಹೀಲಿಂಗ್… ಆಗಿದ್ದು ಕೇಸ್!

Pakka News Web • 27 ಜೂನ್ 2026,

ಸಾಮಾಜಿಕ ಜಾಲತಾಣಗಳಲ್ಲಿ ಒಂದಿಷ್ಟು ಲೈಕ್ಸ್ ಮತ್ತು ಫಾಲೋವರ್ಸ್ ಗಳಿಸುವುದೇ ಇಂದಿನ ಕೆಲ ಯುವಕರ ದೊಡ್ಡ ಸಾಹಸವಾಗಿಬಿಟ್ಟಿದೆ. ಭಟ್ಕಳದಲ್ಲೂ ಇಂತಹುದೇ ಒಂದು ಘಟನೆ ಬೆಳಕಿಗೆ ಬಂದಿದ್ದು, ಸಾರ್ವಜನಿಕ ರಸ್ತೆಗಳಲ್ಲಿ ಜೀವದ ಹಂಗು ತೊರೆದು ಅಪಾಯಕಾರಿ ವ್ಹೀಲಿಂಗ್ ಮಾಡುತ್ತಿದ್ದ ಬೈಕ್ ಸವಾರನೊಬ್ಬ ಈಗ ಸಿಕ್ಕಿಬಿದ್ದಿದ್ದಾನೆ. ತನ್ನ ಬೈಕ್ ಸಾಹಸದ ವಿಡಿಯೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿ, ಇತರ ಯುವಕರು ಹಾಗೂ ಅಪ್ರಾಪ್ತರನ್ನು ದಾರಿ ತಪ್ಪಿಸುತ್ತಿದ್ದ ಈ ಅನಾಮಧೇಯ ಸವಾರನ ವಿರುದ್ಧ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆ ಹಾಗೂ ಬಿ.ಎನ್.ಎಸ್ ಅಡಿಯಲ್ಲಿ ಗಂಭೀರ ಪ್ರಕರಣ ದಾಖಲಾಗಿದೆ.

ಭಟ್ಕಳ ಶಹರ ಪೊಲೀಸ್ ಠಾಣೆಯ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್‌ನ ಸಿಬ್ಬಂದಿ ಜೂನ್ 25ರ ಗುರುವಾರದಂದು ವಾಡಿಕೆಯಂತೆ ಜಾಲತಾಣಗಳನ್ನು ಪರಿಶೀಲಿಸುತ್ತಿದ್ದರು. ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಡೆಸಿದ ಈ ಹುಡುಕಾಟದ ವೇಳೆ, ಪೊಲೀಸ್ ಕಾನ್ಸ್ಟೇಬಲ್ ಸಚಿನ್ ಯಶವಂತರಾವ್ ಪವಾರ್ ಅವರಿಗೆ ‘akkihotpiston’ ಎಂಬ ಇನ್‌ಸ್ಟಾಗ್ರಾಮ್ ಖಾತೆ ಕಣ್ಣಿಗೆ ಬಿದ್ದಿದೆ. ಈ ಖಾತೆಯನ್ನು ಕೆದಕಿದಾಗ ಅದರಲ್ಲಿ ಅಪ್‌ಲೋಡ್ ಆಗಿದ್ದ ಆತಂಕಕಾರಿ ವಿಡಿಯೋಗಳು ಪೊಲೀಸರ ಹುಬ್ಬೇರಿಸುವಂತೆ ಮಾಡಿವೆ.

ಈ ಖಾತೆಯ ಹಿಂದಿರುವ ಸವಾರ ಭಟ್ಕಳದ ಪ್ರಮುಖ ರಸ್ತೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲೇ ತನ್ನ ಅತಿವೇಗದ ಬೈಕ್ ಚಾಲನೆ ಮತ್ತು ವ್ಹೀಲಿಂಗ್ ಕರಾಮತ್ತು ಪ್ರದರ್ಶಿಸಿದ್ದಾನೆ. ಇತರ ವಾಹನ ಸವಾರರ ಹಾಗೂ ಪಾದಚಾರಿಗಳ ಜೀವಕ್ಕೆ ನೇರ ಆಪತ್ತು ತಂದೊಡ್ಡುವ ರೀತಿಯಲ್ಲಿ ಈತ ರಸ್ತೆಯಲ್ಲಿ ಕಾನೂನು ಬಾಹಿರವಾಗಿ ವರ್ತಿಸಿದ್ದಾನೆ. ಇಷ್ಟೇ ಅಲ್ಲದೆ, ಈ ಅಪಾಯಕಾರಿ ದೃಶ್ಯಗಳನ್ನು ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ, ಬೇರೆ ಯುವಕರು ಕೂಡ ಇಂತಹದ್ದೇ ಹುಚ್ಚು ಸಾಹಸ ಮಾಡಲು ಈತ ಪ್ರಚೋದನೆ ನೀಡುತ್ತಿರುವುದು ಕಂಡುಬಂದಿದೆ.

 ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ!

ಬೇಜವಾಬ್ದಾರಿಯಿಂದ ವರ್ತಿಸಿ ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟವಾಡುತ್ತಿದ್ದ ಈ ಇನ್‌ಸ್ಟಾಗ್ರಾಮ್ ಖಾತೆದಾರನಿಗೆ ಬಿಸಿ ಮುಟ್ಟಿಸಲು ಪೊಲೀಸರು ಮುಂದಾಗಿದ್ದಾರೆ. ಕಾನ್ಸ್ಟೇಬಲ್ ಸಚಿನ್ ಪವಾರ್ ಅವರು ನೀಡಿದ ಲಿಖಿತ ದೂರಿನ ಮೇರೆಗೆ ಭಟ್ಕಳ ಶಹರ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅನಾಮಧೇಯನಾಗಿ ಅಡಗಿಕೊಂಡಿರುವ ಈ ‘akkihotpiston’ ಖಾತೆಯ ಅಸಲಿ ಒಡೆಯನನ್ನು ಹೆಡೆಮುರಿ ಕಟ್ಟಲು ಪೊಲೀಸರು ಸದ್ಯ ಸೈಬರ್ ವಿಭಾಗದ ತಾಂತ್ರಿಕ ನೆರವು ಪಡೆದು ತನಿಖೆಯನ್ನು ಚುರುಕುಗೊಳಿಸಿದ್ದಾರೆ.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250