ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Crime

ನಾಡಬಾಂಬ್ ಸ್ಫೋಟ ಪ್ರಕರಣ: ಪೊಲೀಸರ ಬಲೆಗೆ ಬಿದ್ದ ಮತ್ತೊಬ್ಬ ಪ್ರಮುಖ ಆರೋಪಿ!

Pakka News Web • 28 ಜೂನ್ 2026,

ಹಳಿಯಾಳ ತಾಲೂಕಿನ ಕಾಳಗಿನಕೊಪ್ಪ ಗ್ರಾಮದಲ್ಲಿ ಸಂಭವಿಸಿದ್ದ ನಾಡಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಮತ್ತೊಬ್ಬ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಹಳಿಯಾಳ ಪೊಲೀಸರು ಯಶಸ್ವಿಯಾಗಿದ್ದಾರೆ. ಕಾಳಗಿನಕೊಪ್ಪದ ನಿವಾಸಿಯಾದ, ಚಾರ್ಜರ್ ಬಲ್ಬ್ ಮಾರಾಟ ವೃತ್ತಿ ಮಾಡುತ್ತಿದ್ದ ಮುನೇಶ್ವರ ಅಲಿಯಾಸ್ ಮುನ್ಯಾ ವಸಂತ ಕೊರವರ (23) ಬಂಧಿತ ಎರಡನೇ ಆರೋಪಿಯಾಗಿದ್ದಾನೆ. ಹಳಿಯಾಳ ಪಟ್ಟಣದಲ್ಲಿ ಪತ್ತೆಯಾದ ಈತನನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಜೂನ್ 22ರಂದು ಮುಂಜಾನೆ ಕಾಳಗಿನಕೊಪ್ಪ ಗ್ರಾಮದ ವಸಂತ ಕೊರವರ ಎಂಬಾತನ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ನಾಡಬಾಂಬ್‌ಗಳು ಸ್ಫೋಟಗೊಂಡಿದ್ದವು. ಸ್ಫೋಟದ ತೀವ್ರತೆಗೆ ಆರೋಪಿಯ ಮನೆ ಹಾಗೂ ಸುತ್ತಮುತ್ತಲಿನ ನಿವಾಸಿಗಳ ಮನೆಗಳ ಹಂಚು ಮತ್ತು ಬಾಗಿಲುಗಳು ಜಖಂಗೊಂಡು ಸುಮಾರು 1.15 ಲಕ್ಷ ರೂಪಾಯಿಗೂ ಅಧಿಕ ಆಸ್ತಿಪಾಸ್ತಿ ನಷ್ಟವಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಸ್ಫೋಟಕ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಮೊದಲನೇ ಆರೋಪಿ ವಸಂತ ಅಲಿಯಾಸ್ ವಾಸು ಕೊರವರನನ್ನು ಜೂನ್ 24ರಂದೇ ಹುಬ್ಬಳ್ಳಿಯ ತಾರಿಹಾಳದಲ್ಲಿ ಬಂಧಿಸಲಾಗಿತ್ತು. ಇದೀಗ ತಲೆಮರೆಸಿಕೊಂಡಿದ್ದ ಎರಡನೇ ಆರೋಪಿಯನ್ನೂ ಜೂನ್ 26ರಂದು ಸೆರೆಹಿಡಿಯುವ ಮೂಲಕ ಪೊಲೀಸರು ಪ್ರಕರಣದ ಇಬ್ಬರೂ ಆರೋಪಿಗಳನ್ನು ಕಾನೂನಿನ ಕಟಾಕಟೆಗೆ ತಂದು ನಿಲ್ಲಿಸಿದ್ದಾರೆ. ಸಮಯೋಚಿತ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿದ ಹಳಿಯಾಳ ಪೊಲೀಸ್ ತಂಡದ ಕಾರ್ಯವೈಖರಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕರು ತೀವ್ರ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250