ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

State-National

ಚೀನಾದಲ್ಲಿ ಜಿಂಕೆಯಂತೆ ಓಡಿ ಗೆದ್ದ ಯುವಕರಿಗೆ ರೈಲ್ವೆಯಲ್ಲಿ ನೌಕರಿ!  

Pakka News Web • 20 ಜುಲೈ 2026,

ಕಾರವಾರ:ಸತತ ಪ್ರಯತ್ನ, ಕಠಿಣ ಪರಿಶ್ರಮ ಮತ್ತು ತಾಳ್ಮೆಯಿಂದ ಯಾವುದೇ ಸಾಧನೆ ಮಾಡಲು ಸಾಧ್ಯ. ಮುಂದಿನ ದಿನಗಳಲ್ಲಿ ಕಾಮನ್‌ವೆಲ್ತ್, ಏಷ್ಯನ್ ಗೇಮ್ಸ್ ಮತ್ತು ಒಲಂಪಿಕ್ಸ್‌ನಲ್ಲಿ ಪದಕ ಪಡೆಯುವ ಗುರಿ ಹೊಂದಿದ್ದು, ದೇಶ ಹಾಗೂ ಜಿಲ್ಲೆಗೆ ಮತ್ತಷ್ಟು ಕೀರ್ತಿ ತರುತ್ತೇನೆ. ಉತ್ತರ ಕನ್ನಡ ಜಿಲ್ಲೆಯ ಮಕ್ಕಳಲ್ಲಿ ಅತ್ಯುತ್ತಮ ಕ್ರೀಡಾ ಪ್ರತಿಭೆಯಿದ್ದು, ಅವರು ಅಭ್ಯಾಸ ಮಾಡಲು ಕಾರವಾರದ ಜಿಲ್ಲಾ ಕ್ರೀಡಾಂಗಣದಲ್ಲಿ ಅಗತ್ಯ ಸುಸಜ್ಜಿತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಚೀನಾದಲ್ಲಿ ನಡೆದ ಅಂತರರಾಷ್ಟ್ರೀಯ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಜಿಂಕೆಯಂತೆ ಓಡಿ ದೇಶಕ್ಕೆ ಪದಕ ತಂದ ಹಳಿಯಾಳದ ಯುವ ಕ್ರೀಡಾಪಟು ಶಿವಾಜಿ ಪರಶುರಾಮ ಮಾದಪ್ಪನಗೌಡ್ರು ಮನವಿ ಮಾಡಿದರು. ಜಿಲ್ಲಾಡಳಿತದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಚೀನಾದಲ್ಲಿ ಇತ್ತೀಚೆಗೆ ನಡೆದ 23 ವರ್ಷದೊಳಗಿನ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನ 5000 ಮತ್ತು 10000 ಮೀಟರ್ ಓಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದು ಅಪ್ರತಿಮ ಸಾಧನೆ ಮಾಡಿರುವ ಹಳಿಯಾಳ ತಾಲೂಕಿನ ಬೆಳವಟಗಿ ಗ್ರಾಮದ ಶಿವಾಜಿ ಅವರನ್ನು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಭವ್ಯವಾಗಿ ಸನ್ಮಾನಿಸಲಾಯಿತು. ಇವರ ಈ ಅಸಾಧಾರಣ ಅಂತರರಾಷ್ಟ್ರೀಯ ಸಾಧನೆಯನ್ನು ಗುರುತಿಸಿ ಕೇಂದ್ರ ಸರ್ಕಾರವು ಈಗಾಗಲೇ ಭಾರತೀಯ ರೈಲ್ವೆಯಲ್ಲಿ   ಉದ್ಯೋಗ ನೀಡಿ ಗೌರವಿಸಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಅವರು, ಹಳಿಯಾಳ ತಾಲೂಕಿನ ಸಣ್ಣ ಹಳ್ಳಿಯಿಂದ ಬಂದು ಜಾಗತಿಕ ಮಟ್ಟದಲ್ಲಿ ಈ ರೀತಿಯ ಸಾಧನೆ ಮಾಡಿರುವುದು ಇಡೀ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. ಶಿವಾಜಿ ಅವರ ಶಿಸ್ತು ಮತ್ತು ದಿನನಿತ್ಯದ ಕಠಿಣ ಪರಿಶ್ರಮದ ಈ ಸಾಧನೆ ಜಿಲ್ಲೆಯ ಎಲ್ಲಾ ಕ್ರೀಡಾಪಟುಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಲಿ. ಅವರ ಮುಂದಿನ ಕ್ರೀಡಾ ಪಯಣಕ್ಕೆ ಅಗತ್ಯವಿರುವ ಸಂಪೂರ್ಣ ಬೆಂಬಲ ಮತ್ತು ಸಹಕಾರವನ್ನು ಜಿಲ್ಲಾಡಳಿತ ನೀಡಲಿದೆ ಎಂದು ಭರವಸೆ ನೀಡಿದರು.

ಬಳಿಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ ಮಾತನಾಡಿ, ಜಿಲ್ಲೆಯಲ್ಲಿ ಕ್ರೀಡಾಪಟುಗಳಿಗೆ ಪೂರಕವಾದ ಪ್ರಾಕೃತಿಕ ವಾತಾವರಣವಿದ್ದು, ಕಾರವಾರದ ಜಿಲ್ಲಾ ಕ್ರೀಡಾಂಗಣವನ್ನು ಇನ್ನಷ್ಟು ಉತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಪೋಷಕರು ಕೇವಲ ಪಠ್ಯಕ್ಕೆ ಸೀಮಿತಗೊಳಿಸದೆ ಮಕ್ಕಳನ್ನು ಕ್ರೀಡೆ ಮತ್ತು ಸಾಂಸ್ಕೃತಿಕ ರಂಗದಲ್ಲೂ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಶಿವಾಜಿ ಅವರಲ್ಲಿದ್ದ ಕ್ರೀಡಾ ಪ್ರತಿಭೆಯನ್ನು ಆರಂಭಿಕ ಹಂತದಲ್ಲಿ ಗುರುತಿಸಿ ತರಬೇತಿ ನೀಡಿದ ಕೋಚ್ ಪ್ರಕಾಶ್ ಅವರನ್ನು ಸಹ ಗೌರವಿಸಿ ಅಭಿನಂದಿಸಲಾಯಿತು. ಕಾರವಾರದ ರೋಟರಿ ಸೀ ಸೈಡ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಶಿವಾಜಿ ಅವರನ್ನು ಸನ್ಮಾನಿಸಿ, ನಗದು ಬಹುಮಾನ ವಿತರಿಸಿದವು. ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರವಿ ನಾಯ್ಕ ಉಪಸ್ಥಿತರಿದ್ದರು.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250