ಕಾರವಾರ:ಉತ್ತರ ಕನ್ನಡ ಜಿಲ್ಲೆಯ ಸುಂದರ ಕಡಲತೀರಗಳು ಇಂದು ಕೇವಲ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿ ಉಳಿದಿಲ್ಲ; ಬದಲಿಗೆ ದುರಂತಗಳ ರಂಗಸ್ಥಳವಾಗಿ ಮಾರ್ಪಡುತ್ತಿವೆ.
ಕಾರವಾರ, ಮುರುಡೇಶ್ವರ, ಗೋಕರ್ಣ ಸೇರಿದಂತೆ ಜಿಲ್ಲೆಯ ಸಾಲು ಸಾಲು ಕಡಲತೀರಗಳಿಗೆ ಪ್ರವಾಸಕ್ಕೆಂದು ಬರುವ ಪ್ರವಾಸಿಗರು, ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿರುವ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ.

ರಜೆಯ ಖುಷಿಯನ್ನು ಅನುಭವಿಸಲು ಬಂದು, ಕೊನೆಗೆ ಕಣ್ಣೀರಿನಲ್ಲಿ ಮುಳುಗಿ ಹೋಗುತ್ತಿರುವ ಕುಟುಂಬಗಳ ಕಥೆ ಒಂದೆರಡಲ್ಲ. ಹೀಗಿದ್ದರೂ, ಜಾಗೃತರಾಗದ ಪ್ರವಾಸಿಗರಿಗೆ ನಿಜವಾಗಿಯೂ ಬುದ್ಧಿ ಹೇಳುವವರು ಯಾರು ಎನ್ನುವ ಪ್ರಶ್ನೆ ಈಗ ಭೀಕರವಾಗಿ ಎದುರಾಗಿದೆ.
ಕಳೆದ ಎರಡು ದಿನಗಳ ಹಿಂದಷ್ಟೇ ಕಾರವಾರದ ಕಡಲತೀರದಲ್ಲಿ ಸಮುದ್ರಕ್ಕೆ ಇಳಿದು ಪ್ರವಾಸಿಗರೊಬ್ಬರು ದುರಂತವಾಗಿ ಮೃತಪಟ್ಟಿದ್ದರು. ಕಣ್ಣೆದುರೇ ಇಂತಹ ದುರ್ಘಟನೆ ಸಂಭವಿಸಿದ್ದರೂ, ಅದರಿಂದ ಪಾಠ ಕಲಿಯದ ಹಲವು ಪ್ರವಾಸಿಗರು ಇಂದಿಗೂ ಯಾವುದೇ ಭಯವಿಲ್ಲದೆ ಅಲೆಗಳ ನಡುವೆ ಆಟವಾಡುತ್ತಾ, ಮೋಜು-ಮಸ್ತಿನಲ್ಲಿ ತೊಡಗಿರುವುದು ಹೆಚ್ಚಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಸದ್ಯ ಮಳೆಗಾಲವಿದ್ದು, ಗಾಳಿಯ ಕಾರಣದಿಂದ ಅರಬ್ಬಿ ಸಮುದ್ರವು ಎಂದಿಗಿಂತಲೂ ಹೆಚ್ಚು ರೌದ್ರಾವತಾರ ತಾಳಿದೆ. ಈ ಸಮಯದಲ್ಲಿ ಸಮುದ್ರಕ್ಕೆ ಇಳಿಯುವುದು ನೇರವಾಗಿ ಮೃತ್ಯುವನ್ನು ಆಹ್ವಾನಿಸಿದಂತೆ.

ಇದನ್ನರಿತ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಜೀವರಕ್ಷಕ ಸಿಬ್ಬಂದಿ ಕಡಲತೀರಗಳಲ್ಲಿ ಸೂಕ್ತ ಎಚ್ಚರಿಕೆ ಫಲಕಗಳನ್ನು ಹಾಕಿ, ಧ್ವನಿವರ್ಧಕಗಳ ಮೂಲಕ ಸಾರ್ವಜನಿಕರಿಗೆ ಸಮುದ್ರಕ್ಕೆ ಇಳಿಯದಂತೆ ಮನವಿ, ಸೂಚನೆ ನೀಡಿದರೂ ಪ್ರವಾಸಿಗರು ತಮ್ಮ ಮೋಜು ಮಸ್ತಿಯಲ್ಲೆ ಇದ್ದಾರೆ.
ಕಾನೂನು ಮತ್ತು ಮುನ್ನೆಚ್ಚರಿಕೆ ನಿಯಮಗಳನ್ನು ಗಾಳಿಗೆ ತೂರುವ ಪ್ರವಾಸಿಗರ ಬೇಜವಾಬ್ದಾರಿತನ ಮಾತ್ರ ಕಡಿಮೆಯಾಗಿಲ್ಲ. ಜೀವರಕ್ಷಕರು ಎಷ್ಟು ಬಾರಿ ತಡೆದರೂ, ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದರೂ ಪ್ರವಾಸಿಗರು ಅವನ್ನೆಲ್ಲ ಕಡೆಗಣಿಸಿ ಅಪಾಯಕಾರಿ ಜಾಗಗಳಿಗೆ ತೆರಳುತ್ತಿದ್ದಾರೆ.
‘ನಮಗೇನೂ ಆಗುವುದಿಲ್ಲ’ ಎನ್ನುವ ಅತಿಯಾದ ಆತ್ಮವಿಶ್ವಾಸ ಹಾಗೂ ಅಸಡ್ಡೆಯೇ ಇಂದು ಹಲವು ಜೀವಗಳನ್ನು ಬಲಿ ಪಡೆಯುತ್ತಿದೆ. ತಂದೆ-ತಾಯಿ, ಕುಟುಂಬದವರು ತಮ್ಮವರ ಸುರಕ್ಷತೆಯ ಬಗ್ಗೆ ವಹಿಸಬೇಕಾದ ಕನಿಷ್ಠ ಜಾಗರೂಕತೆಯನ್ನೂ ಮರೆಯುತ್ತಿರುವುದು ಶೋಚನೀಯ.
ಪ್ರವಾಸ ಎಂದರೆ ಕೇವಲ ಕ್ಷಣಿಕ ಮೋಜು-ಮಸ್ತಿಯಲ್ಲ; ಸ್ವಂತ ಜೀವದ ಸುರಕ್ಷತೆಯೂ ಅಷ್ಟೇ ಮುಖ್ಯ. ಅಧಿಕಾರಿಗಳು ಅಥವಾ ಜೀವರಕ್ಷಕ ಸಿಬ್ಬಂದಿ ನಿಮ್ಮ ಜೀವದ ಕಾವಲುಗಾರರಾಗಬಹುದೇ ವಿನಃ, ಪ್ರತಿಯೊಬ್ಬರ ಹಿಂದೆ ನಿಂತು ಬುದ್ಧಿ ಹೇಳಲು ಸಾಧ್ಯವಿಲ್ಲ.
ಮಳೆಗಾಲದ ಈ ಕಠಿಣ ಸಮಯದಲ್ಲಿ ಸಮುದ್ರದ ಅಲೆಗಳ ಮುಂದೆ ಸಾಹಸ ಮೆರೆಯಲು ಹೋಗುವುದು ಸಾಹಸವಲ್ಲ, ಅದು ಮೂರ್ಖತನ. ಇನ್ಮುಂದೆಯಾದರೂ ಪ್ರವಾಸಿಗರು ಸ್ವಯಂ ಶಿಸ್ತು ಮೈಗೂಡಿಸಿಕೊಂಡು, ಜಿಲ್ಲಾಡಳಿತದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ಇಲ್ಲವಾದಲ್ಲಿ, ಈ ಸುಂದರ ಕಡಲತೀರಗಳು ಕೇವಲ ಕಣ್ಣೀರಿನ ಕಡಲಾಗಿ ಉಳಿಯುವುದರಲ್ಲಿ ಯಾವುದೇ ಸಂಶಯವಿಲ್ಲ.
