ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

State-National

ಅಡಿಕೆ ಬೆಳೆಗಾರರಿಗೆ ನಿರಾಳ: ನಿಷೇಧ ಆದೇಶ ವಾಪಸ್‌ಗೆ ಸರ್ಕಾರದ ಚಿಂತನೆ

Pakka News Web • 14 ಆಗಸ್ಟ್ 2026,

ರಾಜ್ಯದಲ್ಲಿ ನಿಕೋಟಿನ್‌ಯುಕ್ತ ಗುಟ್ಕಾ ಮತ್ತು ಪಾನ್ ಮಸಾಲ ಮಾರಾಟ ನಿಷೇಧಿಸಿ ಹೊರಡಿಸಲಾಗಿದ್ದ ಆದೇಶವನ್ನು ಹಿಂಪಡೆಯಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು, ಇದು ರಾಜ್ಯದ ಲಕ್ಷಾಂತರ ಅಡಿಕೆ ಬೆಳೆಗಾರರಿಗೆ ದೊಡ್ಡ ಸಮಾಧಾನ ತಂದಿದೆ.

ಆರೋಗ್ಯ ಇಲಾಖೆಯು ರಾಜ್ಯಾದ್ಯಂತ ಒಂದು ವರ್ಷದ ಅವಧಿಗೆ ಗುಟ್ಕಾ ಹಾಗೂ ಪಾನ್ ಮಸಾಲ ಮಾರಾಟವನ್ನು ನಿಷೇಧಿಸಿ ಹೊರಡಿಸಿದ್ದ ಆದೇಶವನ್ನು ಹಿಂಪಡೆಯುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದಾಗಿ ಆತಂಕದಲ್ಲಿದ್ದ ಅಡಿಕೆ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡುವಂತಾಗಿದೆ.

ಆರೋಗ್ಯ ಇಲಾಖೆಯ ಈ ದಿಢೀರ್ ನಿರ್ಧಾರದಿಂದ ಅಡಿಕೆ ಮಾರುಕಟ್ಟೆಯಲ್ಲಿ ಕುಸಿತ ಉಂಟಾಗಬಹುದು ಹಾಗೂ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಬಹುದು ಎಂಬ ಆತಂಕ ಸೃಷ್ಟಿಯಾಗಿತ್ತು. ಈ ಹಿನ್ನೆಲೆಯಲ್ಲಿ ಆಡಳಿತ ಪಕ್ಷದ ಹಿರಿಯ ಶಾಸಕರು ಹಾಗೂ ರೈತ ಮುಖಂಡರ ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿಯಾಗಿ, ರಾಜ್ಯದ ವಿವಿಧ ಭಾಗಗಳ ಬೆಳೆಗಾರರ ಹಿತದೃಷ್ಟಿಯಿಂದ ಆದೇಶವನ್ನು ರದ್ದುಪಡಿಸುವಂತೆ ಬಲವಾಗಿ ಮನವಿ ಮಾಡಿತ್ತು.

ರೈತರ ಕಳಕಳಿಗೆ ತಕ್ಷಣವೇ ಸ್ಪಂದಿಸಿದ ಮುಖ್ಯಮಂತ್ರಿ ಗಳು ಈ ನಿರ್ಧಾರದ ಕುರಿತು ನನಗೆ ಯಾವುದೇ ಪೂರ್ವ ಮಾಹಿತಿ ಇರಲಿಲ್ಲ. ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಭರವಸೆ ನೀಡಿದ್ದರು.

ಬಳಿಕ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲೂ ಈ ವಿಚಾರ ಪ್ರಸ್ತಾಪವಾಗಿದ್ದು, ಮುಖ್ಯಮಂತ್ರಿಗಳು ಆರೋಗ್ಯ ಇಲಾಖೆಯ ಕಾರ್ಯದರ್ಶಿಯವರನ್ನು ತರಾಟೆಗೆ ತೆಗೆದುಕೊಂಡರು. ಇಂತಹ ಮಹತ್ವದ ಆದೇಶ ಹೊರಡಿಸುವ ಮುನ್ನ ಸರ್ಕಾರದ ಗಮನಕ್ಕೆ ತರಬೇಕಿತ್ತು. ಈ ನಿರ್ಧಾರದಿಂದ ರಾಜ್ಯದ ಸುಮಾರು 7 ರಿಂದ 8 ಜಿಲ್ಲೆಗಳ ರೈತರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಲಿದೆ,” ಎಂದು ಅಸಮಾಧಾನ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ರೈತರ ಹಿತದೃಷ್ಟಿಯಿಂದ ನಿಷೇಧ ಆದೇಶವನ್ನು ತಕ್ಷಣವೇ ಹಿಂಪಡೆಯುವಂತೆ ಸೂಚಿಸಿದ್ದಾರೆ.

ಬೆಳೆಗಾರರ ಮೊಗದಲ್ಲಿ ನೆಮ್ಮದಿ

ಸರ್ಕಾರದ ಈ ತ್ವರಿತ ನಿಲುವಿನಿಂದಾಗಿ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ಪ್ರಮುಖ ಅಡಿಕೆ ಬೆಳೆಯುವ ಭಾಗಗಳ ರೈತರು ನಿರಾಳರಾಗಿದ್ದಾರೆ. ಅಡಿಕೆ ಆರ್ಥಿಕತೆಯ ಮೇಲೆ ಬೀಳಬಹುದಾಗಿದ್ದ ದೊಡ್ಡ ಹೊಡೆತ ತಪ್ಪಿದಂತಾಗಿದ್ದು, ಶೀಘ್ರದಲ್ಲೇ ಈ ಹಿಂದಿನ ಆದೇಶವನ್ನು ರದ್ದುಪಡಿಸಿ ಅಧಿಕೃತ ಅಧಿಸೂಚನೆ ಹೊರಬೀಳುವ ಸಾಧ್ಯತೆಯಿದೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250