ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

State-National

ಗೋವಾದಿಂದ ಕೇರಳಕ್ಕೆ ಮದ್ಯ ಸಾಗಿಸುತ್ತಿದ್ದ ಹೋಂಗಾರ್ಡ್ ಜೋಡಿ ಮಂಗಳೂರಿನಲ್ಲಿ ಲಾಕ್!

Pakka News Web • 25 ಆಗಸ್ಟ್ 2026,

ಹೋಂಗಾರ್ಡ್ ಆಗಿದ್ದ ಇಬ್ಬರು ಹಣದಾಸೆಗೆ ಬಿದ್ದು ಅಡ್ಡದಾರಿ ತುಳಿದು ಕಳ್ಳಸಾಗಾಟದ ಜಾಲವೊಂದು ಕರಾವಳಿಯಲ್ಲಿ ಬಯಲಾಗಿದೆ. ನಿತ್ಯದ ಕಾಯಕದಲ್ಲಿ ಸಿಗುವ ಅಲ್ಪ ಆದಾಯಕ್ಕೆ ತೃಪ್ತಿಪಡದ ಕಾರವಾರದ ಇಬ್ಬರು ಹೋಂಗಾರ್ಡ್‌ಗಳು, ರಾತ್ರೋರಾತ್ರಿ ಶ್ರೀಮಂತರಾಗುವ ದುರಾಸೆಯಿಂದ ಗೋವಾ ಮದ್ಯದ ಕಳ್ಳಸಾಗಾಣಿಕೆಗೆ ಇಳಿದು ಅಂತಿಮವಾಗಿ ಅಬಕಾರಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಕಾರವಾರದ ಹಬ್ಬುವಾಡದ ಬಸವರಾಜು (34) ಹಾಗೂ ದೇವಳಮಕ್ಕಿಯ ನಾಗವೇಣಿ (33) ಎಂಬಿಬ್ಬರು ಹೋಂಗಾರ್ಡ್ ಕರ್ತವ್ಯದ ವೇಳೆ ಪರಿಚಿತರಾಗಿ, ಶಾರ್ಟ್‌ಕಟ್‌ನಲ್ಲಿ ಹಣ ಮಾಡುವ ಸಂಚು ರೂಪಿಸಿದ್ದರು. ಇತ್ತೀಚೆಗೆ ನಾಗವೇಣಿ ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಕೆಲಸಕ್ಕೆ ಸೇರಿದರೂ, ಬಿಡುವಿನ ವೇಳೆಯಲ್ಲಿ ಬಸವರಾಜು ಜೊತೆಗೂಡಿ ಈ ಅಕ್ರಮ ದಂಧೆ ಮುಂದುವರಿಸಿದ್ದರು. ಕಾರವಾರದ ವಿನಯ್, ಉಡುಪಿಯ ಪ್ರಶಾಂತ್ ಸುವರ್ಣ ಹಾಗೂ ಕೇರಳದ ಚಂದ್ರಶೇಖರ್ ಎಂಬವರ ನೆರವಿನಿಂದ ಈ ಜೋಡಿ ಗೋವಾದಿಂದ ಕಡಿಮೆ ಬೆಲೆಗೆ ಮದ್ಯ ತಂದು, ಗಡಿ ದಾಟಿಸಿ ಕೇರಳದಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುವ ಪ್ಲ್ಯಾನ್ ಮಾಡಿತ್ತು.

ಯಾರೂ ಊಹಿಸದ ರೀತಿಯಲ್ಲಿ ‘KA-30’ ನೋಂದಣಿಯ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಬರೋಬ್ಬರಿ 438 ಲೀಟರ್ ಗೋವಾ ಮದ್ಯವನ್ನು ತುಂಬಿಕೊಂಡು, ಕರ್ನಾಟಕದ ತೆರಿಗೆಗೆ ಚಳ್ಳೆಹಣ್ಣು ತಿನ್ನಿಸಿ ಕೇರಳದತ್ತ ಈ ಜೋಡಿ ವೇಗವಾಗಿ ಧಾವಿಸುತ್ತಿತ್ತು. ಉತ್ತರ ಕನ್ನಡ ಜಿಲ್ಲೆಯ ಗಡಿ ದಾಟಿ ತಾವು ಸುರಕ್ಷಿತವೆಂದು ಬೀಗುತ್ತಿದ್ದ ಇವರ ಚಲನವಲನದ ಖಚಿತ ಮಾಹಿತಿ ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತ ಬಾಲಕೃಷ್ಣ ಸಿ.ಎಚ್. ಅವರ ಕಿವಿಗೆ ಬಿತ್ತು.

ಕೂಡಲೇ ಎಚ್ಚೆತ್ತ ಅಬಕಾರಿ ಉಪ ಆಯುಕ್ತೆ ಬಿಂದುಶ್ರೀ ಅವರ ಮಾರ್ಗದರ್ಶನದಲ್ಲಿ, ಉಪ ಅಧೀಕ್ಷಕಿ ಗಾಯತ್ರಿ ಸಿ.ಎಚ್. ನೇತೃತ್ವದ ಅಧಿಕಾರಿಗಳ ತಂಡ ಕಾರ್ಯಾಚರಣೆಗೆ ಇಳಿಯಿತು. ಬಂಟ್ವಾಳ ಉಪವಿಭಾಗದ ಉಪ ಅಧೀಕ್ಷಕ ಸಂತೋಷ್ ಮೋಡಗಿ, ನಿರೀಕ್ಷಕರಾದ ಲಕ್ಷ್ಮಣ್ ಶಿವಣಗಿ, ದತ್ತಗುರು ಅಥೆಣಿ, ಉಪ ನಿರೀಕ್ಷಕರಾದ ಜಯಪ್ಪ, ಶಿವಶಂಕರ್, ಅಭಿಷೇಕ್ ಹಾಗೂ ಪೇದೆ ಪ್ರಕಾಶ್ ಅವರನ್ನೊಳಗೊಂಡ ಚುರುಕಿನ ತಂಡ ಆಯಕಟ್ಟಿನ ಜಾಗದಲ್ಲಿ ಕಾರನ್ನು ಅಡ್ಡಗಟ್ಟಿತು.

ಕಾರನ್ನು ಪರಿಶೀಲಿಸಿದಾಗ ಸೀಟುಗಳ ಕೆಳಗೆ ಹಾಗೂ ಡಿಕ್ಕಿಯಲ್ಲಿ ಅಡಗಿಸಿಟ್ಟಿದ್ದ ಭಾರೀ ಪ್ರಮಾಣದ ಮದ್ಯದ ಬಾಟಲಿಗಳು ಪತ್ತೆಯಾಗಿ ಅಧಿಕಾರಿಗಳೇ ದಂಗಾದರು. ಅಕ್ರಮ ಮದ್ಯ ಸಮೇತ ಕಾರನ್ನು ವಶಪಡಿಸಿಕೊಂಡ ಅಬಕಾರಿ ಜಂಟಿ ಆಯುಕ್ತರ ಕಚೇರಿ ನಿರೀಕ್ಷಕಿ ಸುನಿತಾ ಪ್ರಕರಣ ದಾಖಲಿಸಿಕೊಂಡಿದ್ದು, ಕೈಜೋಡಿಸಿ ಪರಾರಿಯಾಗಿರುವ ಉಳಿದ ಮೂವರು ಆರೋಪಿಗಳಿಗಾಗಿ ಶೋಧ ತೀವ್ರಗೊಳಿಸಿದ್ದಾರೆ.  


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250