ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

State-National

ಗೃಹಲಕ್ಷ್ಮಿ ಯೋಜನೆ ಬಗ್ಗೆ ಮಹತ್ವದ ಅಪ್ಡೇಟ್! 

Pakka News Web • 29 ಆಗಸ್ಟ್ 2026,

​ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ ಯೋಜನೆಯಡಿ ಪ್ರತಿ ತಿಂಗಳು ರಾಜ್ಯದ 1.22 ಕೋಟಿಗೂ ಅಧಿಕ ಯಜಮಾನಿಯರ ಖಾತೆಗೆ ತಲಾ 2,000 ರೂ. ನೇರ ನಗದು ಜಮೆಯಾಗುತ್ತಿದೆ.

ಯೋಜನೆ ಆರಂಭವಾಗಿ ಮೂರು ವರ್ಷ ಪೂರೈಸುತ್ತಿರುವ ಈ ಸಂದರ್ಭದಲ್ಲಿ, ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಲು ಹಾಗೂ ಸರ್ಕಾರದ ಬೊಕ್ಕಸದ ಹಣ ಪೋಲಾಗುವುದನ್ನು ತಡೆಯಲು ಫಲಾನುಭವಿಗಳ ಪಟ್ಟಿಯನ್ನು ಸಮಗ್ರವಾಗಿ ಪರಿಷ್ಕರಿಸಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಇತ್ತೀಚೆಗೆ ‘ಗೃಹಜ್ಯೋತಿ’ ಯೋಜನೆಯಲ್ಲಿ ದಾಖಲೆಗಳ ಮರುಪರಿಶೀಲನೆ ಕೈಗೊಂಡು ಅಕ್ರಮಗಳನ್ನು ತಡೆದ ಮಾದರಿಯಲ್ಲೇ, ಇದೀಗ ಗೃಹಲಕ್ಷ್ಮಿಗೂ ಹೊಸ ನಿಯಮಾವಳಿಗಳೊಂದಿಗೆ ಪಾರದರ್ಶಕತೆ ತರಲು ಸಿದ್ಧತೆಗಳು ನಡೆದಿವೆ.

​ಮೃತಪಟ್ಟ ಫಲಾನುಭವಿಗಳ ಹೆಸರಿನಲ್ಲೂ ಪ್ರತಿ ತಿಂಗಳು ನಿರಂತರವಾಗಿ ಹಣ ಜಮೆಯಾಗುತ್ತಿರುವುದು, ಒಂದೇ ಬ್ಯಾಂಕ್ ಖಾತೆಗೆ ಹಲವು ಫಲಾನುಭವಿಗಳ ಹಣ ವರ್ಗಾವಣೆಯಾಗುತ್ತಿರುವುದು ಹಾಗೂ ಸರ್ಕಾರದ ನಿಯಮ ಮೀರಿ ಆದಾಯ ತೆರಿಗೆ ಮತ್ತು ಜಿಎಸ್‌ಟಿ ಪಾವತಿದಾರರ ಕುಟುಂಬಗಳೂ ಸೌಲಭ್ಯ ಪಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ.

ಈ ಗಂಭೀರ ಲೋಪಗಳನ್ನು ತಡೆಗಟ್ಟುವ ಉದ್ದೇಶದಿಂದ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಹಾಗೂ ಗ್ರಾಮ ಪಂಚಾಯತ್ ಮಟ್ಟದ ಸಿಬ್ಬಂದಿ ಮೂಲಕ ಮನೆ-ಮನೆಗೆ ಭೇಟಿ ನೀಡಿ ಭೌತಿಕ ಪರಿಶೀಲನೆ ನಡೆಸಲು ಯೋಜನೆ ರೂಪಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ಫಲಾನುಭವಿಗಳ ಆಧಾರ್-ಬ್ಯಾಂಕ್ ಸೀಡಿಂಗ್ (NPCI ಮ್ಯಾಪಿಂಗ್), ಜೀವಿತ ಪ್ರಮಾಣಪತ್ರ ಹಾಗೂ ರೇಷನ್ ಕಾರ್ಡ್ ವಿವರಗಳನ್ನು ಇ-ಕೆವೈಸಿ ಮೂಲಕ ಕಟ್ಟುನಿಟ್ಟಾಗಿ ಮರುಪರಿಶೀಲಿಸಲಾಗುತ್ತದೆ.

​ಈ ಪರಿಷ್ಕರಣಾ ಪ್ರಕ್ರಿಯೆಯಿಂದಾಗಿ ಅನರ್ಹ ಮತ್ತು ನಕಲಿ ಖಾತೆಗಳನ್ನು ಪಟ್ಟಿಯಿಂದ ಶಾಶ್ವತವಾಗಿ ಕೈಬಿಡಲಾಗಲಿದ್ದು, ಸರ್ಕಾರದ ಸೌಲಭ್ಯವು ಕೇವಲ ನೈಜ ಹಾಗೂ ಬಡ ಕುಟುಂಬದ ಅರ್ಹ ಮಹಿಳೆಯರಿಗೆ ಮಾತ್ರ ಯಾವುದೇ ತಡೆ ಇಲ್ಲದೆ ತಲುಪಲಿದೆ. ಸಾಮಾನ್ಯ ಹಾಗೂ ಅರ್ಹ ಫಲಾನುಭವಿಗಳು ಈ ಸಮೀಕ್ಷೆಯಿಂದ ಆತಂಕಪಡುವ ಅಗತ್ಯವಿಲ್ಲ; ಬದಲಾಗಿ ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಹಾಗೂ ರೇಷನ್ ಕಾರ್ಡ್ ಮಾಹಿತಿ ಸರಿಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಂಡು, ಸಮೀಕ್ಷೆಗೆ ಬರುವ ಅಧಿಕಾರಿಗಳಿಗೆ ಅಗತ್ಯ ದಾಖಲೆಗಳನ್ನು ಒದಗಿಸುವ ಮೂಲಕ ಯೋಜನೆಯ ಸದುಪಯೋಗವನ್ನು ಮುಂದುವರಿಸಬಹುದಾಗಿದೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250