ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Trending

ನಕಲಿ ವೈದ್ಯರ ವಿರುದ್ಧ ಮುಲಾಜಿಲ್ಲದೆ ಕ್ರಮ! 

Pakka News Web • 23 ಜುಲೈ 2026,

ಸಾರ್ವಜನಿಕರ ಆರೋಗ್ಯ ಮತ್ತು ಜೀವದ ಜೊತೆ ಆಟವಾಡುತ್ತಿರುವ ನಕಲಿ ವೈದ್ಯರ ವಿರುದ್ಧ ಕಾರವಾರ ಜಿಲ್ಲಾಡಳಿತ ಈಗ ಸಮರ ಸಾರಿದೆ. ಜಿಲ್ಲೆಯಲ್ಲಿ ನಿಯಮಬಾಹಿರವಾಗಿ ವೈದ್ಯಕೀಯ ವೃತ್ತಿ ನಡೆಸುತ್ತಿರುವ ನಕಲಿ ವೈದ್ಯರು ಹಾಗೂ ಕಾನೂನು ಉಲ್ಲಂಘಿಸುವ ಕ್ಲಿನಿಕ್‌ಗಳ ವಿರುದ್ಧ ಯಾವುದೇ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅವರು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಗುರುವಾರ ಕಾರವಾರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೆಪಿಎಂಇ (KPME) ನೋಂದಣಿ ಮತ್ತು ಕುಂದುಕೊರತೆ ನಿವಾರಣಾ ಪ್ರಾಧಿಕಾರದ ಮಹತ್ವದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿಗೆ ಸಂಪೂರ್ಣವಾಗಿ ತಡೆಹಾಕಲು ಮತ್ತು ಬರುವ ದೂರುಗಳ ಕುರಿತು ಸಮಗ್ರ ಪರಿಶೀಲನೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸಲು ಜಿಲ್ಲಾ ಮಟ್ಟದಲ್ಲಿ ‘ವಿಶೇಷ ಕಾರ್ಯಪಡೆ’ ರಚಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

ಸಭೆಯಲ್ಲಿ ಮಾತನಾಡಿದ ಅವರು, ನಿಯಮ ಉಲ್ಲಂಘಿಸುವ ನಕಲಿ ವೈದ್ಯರು ಮತ್ತು ಅನಧಿಕೃತ ಕ್ಲಿನಿಕ್‌ಗಳ ವಿರುದ್ಧ ಗರಿಷ್ಠ ಪ್ರಮಾಣದ ದಂಡ ವಿಧಿಸಿ, ಕ್ಲಿನಿಕ್‌ಗಳನ್ನು ತಕ್ಷಣವೇ ಬಂದ್ ಮಾಡಬೇಕು. ಒಂದು ವೇಳೆ ಇಂತಹ ಅಕ್ರಮಗಳನ್ನು ಮತ್ತೆ ಮುಂದುವರಿಸಿದರೆ ಅವರ ವಿರುದ್ಧ ನೇರವಾಗಿ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಅಧಿಕಾರಿಗಳಿಗೆ ಖಡಕ್ ನಿರ್ದೇಶನ ನೀಡಿದರು. ವೈದ್ಯರು ತಮಗೆ ನಿಗದಿತ ಅರ್ಹತೆ ಮತ್ತು ಅನುಮತಿ ಇರುವ ವೈದ್ಯಕೀಯ ಪದ್ಧತಿಯಲ್ಲಿ ಮಾತ್ರ ಸೇವೆ ನೀಡಬೇಕು. ಅನುಮತಿಯಿಲ್ಲದೆ ಇತರ ಚಿಕಿತ್ಸೆ ಅಥವಾ ಔಷಧ ನೀಡುವುದು ಕಂಡುಬಂದರೆ ದಾಳಿ ನಡೆಸಲಾಗುವುದು. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಖಾಸಗಿ ಕ್ಲಿನಿಕ್‌ಗಳು, ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್‌ಗಳ ಮೇಲೆ ಅಧಿಕಾರಿಗಳು ನಿಯಮಿತವಾಗಿ ತಪಾಸಣೆ ನಡೆಸಿ ಪರಿಶೀಲಿಸಬೇಕು ಎಂದರು.

ಇನ್ನು ಜಿಲ್ಲೆಯಲ್ಲಿ ಏಪ್ರಿಲ್ 2026 ರಿಂದ ಇದುವರೆಗೆ ಕೆಪಿಎಂಇ ಕಾಯ್ದೆ ಉಲ್ಲಂಘಿಸಿರುವ 7 ನಕಲಿ ವೈದ್ಯರ ವಿರುದ್ಧ ಈಗಾಗಲೇ ಕ್ರಮ ಕೈಗೊಂಡು, ಅವರ ಕ್ಲಿನಿಕ್‌ಗಳನ್ನು ಮುಚ್ಚಿಸಲಾಗಿದೆ ಹಾಗೂ ಅವರಿಂದ ಒಟ್ಟು 1,45,000 ದಂಡ ವಸೂಲಿ ಮಾಡಲಾಗಿದೆ ಎಂದು ಡಿಸಿ ಮಾಹಿತಿ ನೀಡಿದರು. ಈ ಮಹತ್ವದ ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸಂಜಯ ದೊಡ್ಡಮನಿ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಜಗದೀಶ ಯಾಜಿ, ಆರ್ಥೋಪೆಡಿಕ್ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ನಿತಿನ್ ಪಿಕಳೆ, ಐ.ಎಂ.ಎ. ಅಧ್ಯಕ್ಷ ಡಾ. ಸುರೇಶ್ ಭಟ್, ಸಾಮಾಜಿಕ ಕಾರ್ಯಕರ್ತೆ ಯಶೋಧ ಹೆಗಡೆ, ವಕೀಲ ಡಾ. ಕೃಷ್ಣಾನಂದ ಬಿ. ನಾಯ್ಕ ಹಾಗೂ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವಿನಿ ಬೊರಕರ್ ಸೇರಿದಂತೆ ಹಲವು ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250