ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Trending

ಜಾಗೃತಿಗಾಗಿ ರೀಲ್ಸ್ ಮಾಡಿ! ಬಹುಮಾನ ಗೆಲ್ಲಿ

Pakka News Web • 24 ಆಗಸ್ಟ್ 2026,

ಕಾರವಾರ: ಸೈಬರ್ ವಂಚನೆಯ ಬಲೆಗೆ ಬೀಳದಂತೆ ಎಚ್ಚರಿಕೆ, ಸಂಚಾರಿ ನಿಯಮಗಳ ಪಾಲನೆ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮದ ವಿರುದ್ಧ ಜಾಗೃತಿ.

ಈ ಮೂರು ಪ್ರಮುಖ ಸಂದೇಶಗಳನ್ನು ಜನರಿಗೆ ತಲುಪಿಸಲು ಉತ್ತರ ಕನ್ನಡ ಜಿಲ್ಲಾ ಪೊಲೀಸರು ಇದೀಗ ಸಾಮಾಜಿಕ ಜಾಲತಾಣಗಳ ಮೊರೆ ಹೋಗಿದ್ದಾರೆ. ಜನರಲ್ಲಿರುವ ಸೃಜನಶೀಲ ಪ್ರತಿಭೆಯನ್ನು ಬಳಸಿಕೊಂಡು ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶೇಷ ರೀಲ್ಸ್ ಸ್ಪರ್ಧೆಯನ್ನು ಆಯೋಜಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿರುವುದು, ಮಾದಕ ವ್ಯಸನದ ವಿರುದ್ಧ ಜಾಗೃತಿ ಮೂಡಿಸುವ ಅಗತ್ಯ ಹಾಗೂ ನಗರ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಮತ್ತು ನಿಯಮ ಉಲ್ಲಂಘನೆಗಳ ಸಮಸ್ಯೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ವಿಭಿನ್ನ ರೀತಿಯ ಅಭಿಯಾನಕ್ಕೆ ಮುಂದಾಗಿದೆ. ಪೊಲೀಸರ ಭಾಷಣ ಅಥವಾ ಪ್ರಕಟಣೆಗಳಿಗಿಂತ ಯುವಜನರನ್ನು ಹೆಚ್ಚು ತಲುಪುವ ಸಾಮಾಜಿಕ ಜಾಲತಾಣಗಳ ರೀಲ್ಸ್‌ಗಳ ಮೂಲಕ ಪರಿಣಾಮಕಾರಿ ಸಂದೇಶ ನೀಡುವುದು ಈ ಸ್ಪರ್ಧೆಯ ಉದ್ದೇಶವಾಗಿದೆ.

ಸೈಬರ್ ಅಪರಾಧದಿಂದ ಹೇಗೆ ಸುರಕ್ಷಿತವಾಗಿರಬೇಕು, ಸಂಚಾರಿ ನಿಯಮಗಳನ್ನು ಏಕೆ ಪಾಲಿಸಬೇಕು ಹಾಗೂ ಮಾದಕ ವಸ್ತುಗಳಿಂದ ದೂರವಿರುವುದು ಏಕೆ ಅಗತ್ಯ ಎಂಬುದನ್ನು ಸೃಜನಾತ್ಮಕವಾಗಿ ಕಟ್ಟಿಕೊಡುವ ಅವಕಾಶವನ್ನು ಸಾರ್ವಜನಿಕರಿಗೆ ನೀಡಲಾಗಿದೆ.

ಆಸಕ್ತರು ಈ ಮೂರು ವಿಷಯಗಳ ಕುರಿತು ಪ್ರತ್ಯೇಕವಾಗಿ ರೀಲ್ಸ್ ಸಿದ್ಧಪಡಿಸಬಹುದಾಗಿದೆ. ಪ್ರತಿಯೊಂದು ವಿಡಿಯೋ 90 ಸೆಕೆಂಡ್‌ಗಳ ಒಳಗಿರಬೇಕು ಹಾಗೂ ಉತ್ತಮ ಗುಣಮಟ್ಟದಿಂದ ಕೂಡಿರಬೇಕು. ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ವಿಡಿಯೋ ರಚಿಸಬಹುದಾಗಿದ್ದು, ಅದು ಸಂಪೂರ್ಣವಾಗಿ ಸ್ಪರ್ಧಿಯ ಸ್ವಂತ ಸೃಷ್ಟಿಯಾಗಿರಬೇಕು.

ಆದರೆ ಸೃಜನಶೀಲತೆಯ ಹೆಸರಿನಲ್ಲಿ ಅಶ್ಲೀಲತೆ, ಅವಹೇಳನಕಾರಿ ಅಂಶಗಳು ಅಥವಾ ಇತರರ ರಾಜಕೀಯ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ವಿಷಯಗಳಿಗೆ ಅವಕಾಶವಿಲ್ಲ. ಸಾಮಾಜಿಕ ಜವಾಬ್ದಾರಿಯನ್ನು ಕಾಪಾಡಿಕೊಂಡೇ ಪರಿಣಾಮಕಾರಿ ಸಂದೇಶವನ್ನು ನೀಡುವ ರೀಲ್ಸ್‌ಗಳಿಗೆ ಆದ್ಯತೆ ಸಿಗಲಿದೆ.

ಸ್ಪರ್ಧಿಗಳು ತಮ್ಮ ವಿಡಿಯೋಗಳನ್ನು ಫೇಸ್‌ಬುಕ್, ಇನ್‌ಸ್ಟಾಗ್ರಾಂ ಹಾಗೂ ಯೂಟ್ಯೂಬ್‌ನಲ್ಲಿ ಪ್ರಕಟಿಸಿ, ನಿಗದಿತ ಹ್ಯಾಶ್‌ಟ್ಯಾಗ್ ಬಳಸುವುದರ ಜೊತೆಗೆ #uttarakannadadistrictpolice ಅನ್ನು ಟ್ಯಾಗ್ ಮಾಡಬೇಕು. ಬಳಿಕ ಪ್ರಕಟಿಸಿದ ವಿಡಿಯೋದ ಲಿಂಕ್ ಅಥವಾ ಅಗತ್ಯ ಮಾಹಿತಿಯನ್ನು ಜಿಲ್ಲಾ ಸೋಶಿಯಲ್ ಮೀಡಿಯಾ ಸೆಲ್‌ನ 8277988311 ಮೊಬೈಲ್ ಸಂಖ್ಯೆಗೆ ಕಳುಹಿಸಬೇಕು. ವಿಡಿಯೋ ಸಲ್ಲಿಕೆಗೆ ಸೆಪ್ಟೆಂಬರ್ 20, 2026 ಕೊನೆಯ ದಿನವಾಗಿದೆ.

ಸ್ಪರ್ಧೆಯ ಮೌಲ್ಯಮಾಪನದಲ್ಲೂ ಕೇವಲ ವಿಡಿಯೋ ಗುಣಮಟ್ಟಕ್ಕೆ ಸೀಮಿತವಾಗದೆ, ಅದರ ಸಾಮಾಜಿಕ ಪರಿಣಾಮಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಸಾಮಾಜಿಕ ಜಾಗೃತಿ ಮತ್ತು ಸಂದೇಶ, ವಿಷಯದ ಪ್ರಸ್ತುತತೆ ಹಾಗೂ ಪ್ರಭಾವ, ಸೃಜನಶೀಲತೆ ಮತ್ತು ಕಥಾವಸ್ತು, ವಿಡಿಯೋ ಗುಣಮಟ್ಟ ಮತ್ತು ಪ್ರಸ್ತುತಿ ಹಾಗೂ ಸಾರ್ವಜನಿಕ ಸ್ಪಂದನೆ—ಈ ಐದು ವಿಭಾಗಗಳಲ್ಲಿ ತಲಾ 20 ಅಂಕಗಳಂತೆ ಒಟ್ಟು 100 ಅಂಕಗಳನ್ನು ನಿಗದಿಪಡಿಸಲಾಗಿದೆ.

ಅತ್ಯುತ್ತಮವಾಗಿ ಮೂಡಿಬರುವ ವಿಡಿಯೋಗಳಿಗೆ ಪ್ರಶಸ್ತಿ ಫಲಕ ಹಾಗೂ ಪ್ರಶಸ್ತಿ ಪತ್ರ ನೀಡಲಾಗುತ್ತದೆ. ಆಯ್ಕೆಯಾಗುವ ಉತ್ತಮ ವಿಡಿಯೋಗಳನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿಯೂ ಪ್ರಕಟಿಸಲಾಗುವುದು. ಹೀಗಾಗಿ ಕ್ಯಾಮೆರಾ ಹಿಡಿದು ಕೇವಲ ರೀಲ್ಸ್ ಮಾಡುವುದಕ್ಕಿಂತ, ಸಮಾಜಕ್ಕೆ ಉಪಯುಕ್ತವಾದ ಸಂದೇಶವನ್ನು ಹೊಸ ರೀತಿಯಲ್ಲಿ ಹೇಳುವವರಿಗೆ ಪೊಲೀಸ್ ಇಲಾಖೆಯ ಈ ಸ್ಪರ್ಧೆ ವೇದಿಕೆಯಾಗಲಿದೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250