ಹೊನ್ನಾವರ: ಕನ್ನಡ ನಾಡು, ನುಡಿ ಹಾಗೂ ಭಾಷೆಯ ಹಿತರಕ್ಷಣೆಯ ಹೆಸರಿನಲ್ಲಿ ಸಂಘಟನಾತ್ಮಕ ಒಗ್ಗಟ್ಟಿನ ಸಂದೇಶ ಸಾರಬೇಕಾದ ಕರ್ನಾಟಕ ರಕ್ಷಣಾ ವೇದಿಕೆಯಲ್ಲೇ ಇದೀಗ ಕಾರ್ಯಕ್ರಮವೊಂದ ಆಮಂತ್ರಣ ಪತ್ರಿಕೆಯಲ್ಲಿ ಕರವೇ ಜಿಲ್ಲಾಧ್ಯಕ್ಷ ಅಕ್ಷಯ ನಾಗೇಕರ್ ಫೋಟೋ ಬಳಕೆ ಮಾಡದೆ ಇರುವುದು ಚರ್ಚೆಗೆ ಗ್ರಾಸವಾಗಿದೆ.

ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಹೊನ್ನಾವರ ತಾಲೂಕು ಘಟಕದ ವತಿಯಿಂದ ನವೆಂಬರ್ 1ರಿಂದ 4ರವರೆಗೆ ಆಯೋಜಿಸಲಾಗಿರುವ ನಾಲ್ಕು ದಿನಗಳ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ರಾಜ್ಯಾಧ್ಯಕ್ಷರು, ತಾಲೂಕು ಘಟಕದ ಪದಾಧಿಕಾರಿಗಳು ಹಾಗೂ ವಿವಿಧ ರಾಜಕೀಯ ಮುಖಂಡರ ಫೋಟೋಗಳಿಗೆ ಸ್ಥಾನ ನೀಡಲಾಗಿದೆ. ಆದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಘಟನೆ ಕಟ್ಟಲು ಶ್ರಮಿಸುತ್ತಿರುವ ಕರವೇ ಜಿಲ್ಲಾಧ್ಯಕ್ಷ ಅಕ್ಷಯ ನಾಗೇಕರ್ ಅವರ ಫೋಟೋಗೆ ಮಾತ್ರ ಅವಕಾಶ ನೀಡದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಅವರ ಫೋಟೋ ಸೇರಿದಂತೆ ತಾಲೂಕು ಘಟಕದ ಪದಾಧಿಕಾರಿಗಳ ವಿವರಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ. ವಿವಿಧ ರಾಜಕೀಯ ಮುಖಂಡರ ಫೋಟೋಗಳಿಗೂ ಜಾಗ ಕಲ್ಪಿಸಲಾಗಿದೆ. ಆದರೆ, ಸಂಘಟನೆಯ ಜಿಲ್ಲಾ ಮಟ್ಟದ ಜವಾಬ್ದಾರಿ ಹೊಂದಿರುವ ಜಿಲ್ಲಾಧ್ಯಕ್ಷರ ಫೋಟೋವನ್ನೇ ಕೈಬಿಟ್ಟಿರುವುದು ಸಂಘಟನೆಯೊಳಗಿನ ಸಮನ್ವಯದ ಬಗ್ಗೆ ಅನುಮಾನ ಮೂಡಿಸುವಂತಿದೆ. ಕನಿಷ್ಠ ಸೌಜನ್ಯದ ದೃಷ್ಟಿಯಿಂದಲಾದರೂ ಜಿಲ್ಲಾಧ್ಯಕ್ಷರ ಫೋಟೋ ಪ್ರಕಟಿಸಬಹುದಿತ್ತಲ್ಲವೇ ಎಂಬ ಪ್ರಶ್ನೆ ಇದೀಗ ಮುನ್ನೆಲೆಗೆ ಬಂದಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಸಂಘಟನೆಯನ್ನು ವಿಸ್ತರಿಸಲು ಹಾಗೂ ಕಾರ್ಯಕರ್ತರನ್ನು ಒಗ್ಗೂಡಿಸಲು ಜಿಲ್ಲಾಧ್ಯಕ್ಷ ಅಕ್ಷಯ ನಾಗೇಕರ್ ಅವರು ಶ್ರಮಿಸುತ್ತಿರುವ ಸಂದರ್ಭದಲ್ಲಿ, ಜಿಲ್ಲೆಯ ಒಂದು ತಾಲೂಕು ಘಟಕದ ಪ್ರಮುಖ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಅವರಿಗೆ ಸ್ಥಾನ ನೀಡದಿರುವುದು ಸಹಜವಾಗಿಯೇ ಚರ್ಚೆಗೆ ಕಾರಣವಾಗಿದೆ. ಇದು ಉದ್ದೇಶಪೂರ್ವಕ ನಿರ್ಲಕ್ಷ್ಯವೇ ಅಥವಾ ಆಹ್ವಾನ ಪತ್ರಿಕೆ ಸಿದ್ಧಪಡಿಸುವಾಗ ನಡೆದ ಪ್ರಮಾದವೇ ಎಂಬುದರ ಬಗ್ಗೆ ಸ್ಪಷ್ಟನೆ ಹೊರಬರಬೇಕಿದೆ.

ಕನ್ನಡ ರಾಜ್ಯೋತ್ಸವದಂತಹ ಮಹತ್ವದ ಕಾರ್ಯಕ್ರಮ ಸಂಘಟನೆಯ ಒಗ್ಗಟ್ಟು, ಶಿಸ್ತು ಮತ್ತು ಪರಸ್ಪರ ಗೌರವವನ್ನು ಪ್ರದರ್ಶಿಸಬೇಕಾದ ವೇದಿಕೆ. ಇಂತಹ ಸಂದರ್ಭದಲ್ಲಿ ಸಂಘಟನೆಯ ಪ್ರಮುಖ ಜಿಲ್ಲಾ ಪದಾಧಿಕಾರಿಯ ಫೋಟೋ ಇಲ್ಲದಿರುವುದು ಕೇವಲ ಒಂದು ಫೋಟೋಗೆ ಸೀಮಿತವಾದ ವಿಚಾರವಲ್ಲ; ಸಂಘಟನೆಯೊಳಗಿನ ಸಂವಹನ ಮತ್ತು ಸಮನ್ವಯದ ಬಗ್ಗೆಯೂ ಪ್ರಶ್ನೆ ಎತ್ತುವಂತಾಗಿದೆ. ಒಂದೆಡೆ ಕನ್ನಡದ ಹೆಸರಿನಲ್ಲಿ ನಾಲ್ಕು ದಿನಗಳ ಅದ್ದೂರಿ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಯುತ್ತಿದ್ದರೆ, ಮತ್ತೊಂದೆಡೆ ಸಂಘಟನೆಯ ಜಿಲ್ಲಾ ನಾಯಕತ್ವಕ್ಕೆ ಆಹ್ವಾನ ಪತ್ರಿಕೆಯಲ್ಲಿ ಸ್ಥಾನ ಸಿಗದಿರುವುದು ಯಾವ ಸಂದೇಶ ನೀಡುತ್ತದೆ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.
ಆದರೆ, ಜಿಲ್ಲಾಧ್ಯಕ್ಷರ ಫೋಟೋ ಕೈಬಿಟ್ಟಿರುವುದಕ್ಕೆ ಹೊನ್ನಾವರ ಘಟಕದ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪಕ್ಕಾ ಲೋಕಲ್ ಡಿಜಿಟಲ್ ಜಿಲ್ಲಾಧ್ಯಕ್ಷ ಅಕ್ಷಯ ಅವರನ್ನು ಸಂಪರ್ಕಿಸಿದಾಗ ಈ ಬಗ್ಗೆ ಯಾವುದೇ ಪ್ರತಿಕ್ರಿಯೇ ನೀಡದೆ, ಸುಮ್ಮನಾದರು.
