ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದಿನಿಂದ ಜುಲೈ 2 ಹಾಗೂ ಜುಲೈ 5 ರಿಂದ ಜುಲೈ 7ರವರೆಗೆ ಭಾರಿ ಮಳೆ ಹಾಗೂ ಬಿರುಗಾಳಿ ಬೀಸುವ ಮುನ್ಸೂಚನೆ ಇದ್ದು, ಹವಾಮಾನ ಇಲಾಖೆ ‘ರೆಡ್ ಅಲರ್ಟ್’ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ಪ್ರವಾಸಿಗರು ಕೆರೆ, ನದಿ ಹಾಗೂ ಸಮುದ್ರ ತೀರಕ್ಕೆ ಇಳಿಯದಂತೆ ಮತ್ತು ಮೀನುಗಾರರು ಕಡ್ಡಾಯವಾಗಿ ಸಮುದ್ರಕ್ಕೆ ತೆರಳದಂತೆ ಹವಾಮಾನ ಇಲಾಖೆ ತಿಳಿಸಿದೆ.
ಮಳೆ ಹಾಗೂ ಸಿಡಿಲಿನ ಸಂದರ್ಭದಲ್ಲಿ ರೈತರು ಕೃಷಿ ಚಟುವಟಿಕೆಗಳಿಂದ ದೂರವಿರಬೇಕು ಮತ್ತು ಸಾರ್ವಜನಿಕರು ವಿದ್ಯುತ್ ಕಂಬ, ಅಪಾಯಕಾರಿ ಮರ ಹಾಗೂ ಶಿಥಿಲಗೊಂಡ ಕಟ್ಟಡಗಳ ಆಶ್ರಯ ಪಡೆಯಬಾರದು ಎಂದು ಸೂಚಿಸಲಾಗಿದೆ. ತಗ್ಗು ಪ್ರದೇಶ ಹಾಗೂ ದುರ್ಬಲ ಮನೆಗಳಲ್ಲಿ ವಾಸಿಸುವವರು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ಅಥವಾ ತಾಲೂಕು ಆಡಳಿತದ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಗೊಳ್ಳಲು ಕೋರಲಾಗಿದೆ.
