ಕಾರವಾರ: ಇಲ್ಲಿನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಬುಧವಾರ ನಡೆದ ಜಿಲ್ಲಾ ವಕೀಲರ ಸಂಘದ ಚುನಾವಣೆಯಲ್ಲಿ ಹಿರಿಯ ವಕೀಲ ನಾಗರಾಜ ವಿ. ನಾಯಕ ಅವರು ನೂತನ ಅಧ್ಯಕ್ಷರಾಗಿ ಭರ್ಜರಿ ಜಯ ಗಳಿಸಿದ್ದಾರೆ.

ತೀವ್ರ ಕುತೂಹಲ ಕೆರಳಿಸಿದ್ದ ಈ ಬಾರಿಯ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿ ನಾಗರಾಜ ವಿ. ನಾಯಕ, ಎಂ.ಎಲ್. ನಾಯ್ಕ, ಸಂತೋಷ್ ಭಾಗ್ವತ್ ಹಾಗೂ ರವಿ ಬೇಳೂರಕರ್ ಸೇರಿದಂತೆ ನಾಲ್ವರು ಕಣದಲ್ಲಿದ್ದರು. ಅಂತಿಮವಾಗಿ ಪ್ರತಿಸ್ಪರ್ಧಿಗಳಿಗಿಂತ ಹೆಚ್ಚಿನ ಮತಗಳನ್ನು ಪಡೆಯುವ ಮೂಲಕ ನಾಗರಾಜ ನಾಯಕ ಅವರು ಅಧ್ಯಕ್ಷ ಗಾದಿಯನ್ನು ಅಲಂಕರಿಸಿದ್ದಾರೆ.

ಅದೇ ರೀತಿ ಸಂಘದ ಪ್ರಮುಖ ಹುದ್ದೆಯಾದ ಕಾರ್ಯದರ್ಶಿ ಸ್ಥಾನಕ್ಕೆ ನಾಗರಾಜ ದೇಶಭಂಡಾರಿ ಹಾಗೂ ಜಿ.ಎಫ್. ನಾಯ್ಕ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಇದರಲ್ಲಿ ನಾಗರಾಜ ದೇಶಭಂಡಾರಿ ಅವರು ಗರಿಷ್ಠ ಮತಗಳನ್ನು ಪಡೆದು ವಿಜಯಶಾಲಿಯಾಗಿದ್ದಾರೆ. ಉಳಿದಂತೆ ಸಂಘದ ಖಜಾಂಚಿಯಾಗಿ ಪದ್ಮಾ ತಾಂಡೇಲ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಭಟ್ಕಳದ ಮಾರುತಿ ಬಿ. ನಾಯ್ಕ ಹಾಗೂ ಮಹಿಳಾ ಸದಸ್ಯರಾಗಿ ದೀಪಾ ಎಸ್. ನಾಯ್ಕ ಮತ್ತು ಸುಮಿತಾ ಪಿ. ಭೂತೆ ಅವರುಗಳು ಆಯ್ಕೆಯಾಗಿದ್ದಾರೆ.

1862ರಲ್ಲಿ ಪ್ರಾರಂಭವಾದ ನಮ್ಮ ಜಿಲ್ಲಾ ವಕೀಲರ ಸಂಘವು ಸಮಾಜಕ್ಕೆ ಹಿರಿಯ ಬುದ್ಧಿಜೀವಿಗಳು ಹಾಗೂ ಶ್ರೇಷ್ಠ ವಕೀಲರನ್ನು ಕೊಡುಗೆಯಾಗಿ ನೀಡಿದ ಹೆಗ್ಗಳಿಕೆ ಹೊಂದಿದೆ. ವಿಶ್ವಕವಿ ರವೀಂದ್ರನಾಥ ಟ್ಯಾಗೋರರ ಅಣ್ಣ ಸತ್ಯೇಂದ್ರನಾಥ ಟ್ಯಾಗೋರ್ ಅವರು ಇಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದರು. ಆ ಕಾಲದಲ್ಲಿ ಕಾರವಾರಕ್ಕೆ ಬಂದಿದ್ದ ರವೀಂದ್ರನಾಥ ಟ್ಯಾಗೋರರು ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮರುಳಾಗಿ ಕಾರವಾರವನ್ನು ‘ಕರ್ನಾಟಕದ ಕಾಶ್ಮೀರ’ ಎಂದು ಬಣ್ಣಿಸಿದ್ದರು. ಇಂತಹ ಐತಿಹಾಸಿಕ ಹಿನ್ನೆಲೆಯುಳ್ಳ ಸಂಘದ ಅಧ್ಯಕ್ಷನಾಗಿ ಆಯ್ಕೆಯಾಗಿರುವುದು ನನಗೆ ಅತ್ಯಂತ ಹೆಮ್ಮೆ ತಂದಿದೆ. ನನ್ನನ್ನು ನಂಬಿ ಮತಹಾಕಿದ ಎಲ್ಲಾ ವಕೀಲ ಮಿತ್ರರಿಗೂ ಧನ್ಯವಾದಗಳು. ಸಂಘದ ಘನತೆ ಮತ್ತು ಗೌರವವನ್ನು ಸದಾ ಎತ್ತಿಹಿಡಿಯುವ ಕೆಲಸ ಮಾಡುತ್ತೇನೆ ಎಂದು ಅಧ್ಯಕ್ಷ ನಾಗರಾಜ ನಾಯಕ ಹೇಳಿದ್ದಾರೆ.
