ಕಾರವಾರ:ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಆನಂದ್ ಅಸ್ನೋಟಿಕರ್ ಅವರ ವಿರುದ್ಧ ಇತ್ತೀಚೆಗೆ ಬಿಜೆಪಿ ಮುಖಂಡ ಜಗದೀಶ ನಾಯಕ ಮೊಗಟಾ ಮಾಡಿರುವ ಆರೋಪಗಳು ಮತ್ತು ಟೀಕೆಗಳು ಸಂಪೂರ್ಣ ಖಂಡನೀಯವಾಗಿದ್ದು, ಅವರ ಬಗ್ಗೆ ಮಾತನಾಡುವ ಯಾವುದೇ ಯೋಗ್ಯತೆ ಮೊಗಟಾ ಅವರಿಗಿಲ್ಲ ಎಂದು ಜನತಾದಳ (ಎಸ್) ಜಿಲ್ಲಾ ಘಟಕದ ವಕ್ತಾರ ಉದಯ ಭೋವಿ ತೀವ್ರವಾಗಿ ತಿರುಗೇಟು ನೀಡಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆನಂದ್ ಅಸ್ನೋಟಿಕರ್ ಅವರು ಕ್ಷೇತ್ರದಿಂದ ನಾಪತ್ತೆಯಾಗಿದ್ದಾರೆ ಮತ್ತು ಸಕ್ರಿಯವಾಗಿಲ್ಲ ಎಂಬ ಆರೋಪವನ್ನು ತಳ್ಳಿಹಾಕಿದರು. ಅಸ್ನೋಟಿಕರ್ ಅವರು ಕಾರವಾರಕ್ಕೆ ಬಂದಾಗಲೆಲ್ಲಾ ಪ್ರತಿಯೊಂದು ಸಮಾಜದ ಮುಖಂಡರು, ಸಾರ್ವಜನಿಕರು, ಪಕ್ಷದ ಕಾರ್ಯಕರ್ತರು ಹಾಗೂ ಯುವಕರನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಬಗೆಹರಿಸಲು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ತಾವು ಮಾಡುವ ಕೆಲಸವನ್ನು ಪತ್ರಿಕೆಗಳಲ್ಲಾಗಲಿ ಅಥವಾ ವಾಟ್ಸಾಪ್ ಗ್ರೂಪ್‌ಗಳಲ್ಲಾಗಲಿ ಹಾಕಿ ಪ್ರಚಾರ ಗಿಟ್ಟಿಸಿಕೊಳ್ಳುವ ಅವಶ್ಯಕತೆ ಅವರಿಗೆ ಇಲ್ಲ.
ಇದೇ ವೇಳೆ ಜಗದೀಶ್ ಮೊಗಟಾ ಅವರ ರಾಜಕೀಯ ಸನ್ಯಾಸದ ಸವಾಲನ್ನು ಸ್ವೀಕರಿಸಿದ ಉದಯ ಭೋವಿ, ಮೊಗಟಾ ಅವರು ಈ ಹಿಂದೆ ಯಾವ ಯಾವ ಚುನಾವಣೆಯಲ್ಲಿ ಯಾವ ಪಕ್ಷದೊಂದಿಗೆ ಇದ್ದರು ಮತ್ತು ಯಾರ ಪರ ಕೆಲಸ ಮಾಡಿದ್ದರು ಎಂಬುದನ್ನು ಮೊದಲು ನೆನಪಿಸಿಕೊಳ್ಳಲಿ ಎಂದು ವ್ಯಂಗ್ಯವಾಡಿದರು.
ಇದಕ್ಕೆ ಸಾಕ್ಷಿಯಾಗಿ, ಕಳೆದ 2023ರ ವಿಧಾನಸಭಾ ಚುನಾವಣೆಯಲ್ಲಿ ಜಗದೀಶ ಮೊಗಟಾ ಅವರ ಸ್ವಂತ ಬೂತ್‌ನಲ್ಲಿ ಒಟ್ಟು 636 ಮತದಾರರ ಪೈಕಿ 527 ಮತಗಳು ಚಲಾವಣೆಯಾಗಿದ್ದು, ಅದರಲ್ಲಿ ಬಿಜೆಪಿಗೆ 228 ಮತಗಳು ಬಿದ್ದರೆ, ಕಾಂಗ್ರೆಸ್‌ನ ಸತೀಶ್ ಸೈಲ್ ಅವರಿಗೆ 245 ಮತಗಳು ಬಿದ್ದಿವೆ. ಸ್ವಂತ ಬೂತ್‌ನಲ್ಲೇ ಬಿಜೆಪಿಗಿಂತ ಕಾಂಗ್ರೆಸ್‌ಗೆ ಹೆಚ್ಚು ಮತಗಳು ಬೀಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ಪ್ರತಿ ಚುನಾವಣೆಯ ಮುನ್ನ ಮೊಗಟಾ ಅವರು ಯಾವ ಪಕ್ಷಕ್ಕಾಗಿ ದುಡಿಯುತ್ತಾರೆ ಎಂಬುದು ಸ್ಥಳೀಯ ಜನರಿಗೆ ಚೆನ್ನಾಗಿ ಗೊತ್ತಿದೆ ಎಂದರು.
ಅಷ್ಟೇ ಅಲ್ಲದೆ, ಹಿಂದೆ 2013 ರಲ್ಲಿ ಆನಂದ್ ಅಸ್ನೋಟಿಕರ್ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದಾಗ, ಸ್ವತಂತ್ರ ಅಭ್ಯರ್ಥಿಯಾಗಿದ್ದ ಸತೀಶ್ ಸೈಲ್ ಪರವಾಗಿ ಮೊಗಟಾ ಇದೇ ರೀತಿಯ ವ್ಯವಹಾರ ಮಾಡಿದ್ದರು. ಈ ಭ್ರಷ್ಟಾಚಾರಕ್ಕೆ ಸಾಕ್ಷಿ ಬೇರೆಲ್ಲೂ ಇಲ್ಲ, ಅವರ ಬಳಿಯೇ ಇದೆ ಎಂದು ಆರೋಪಿಸಿದರು.
ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಟಿಕೆಟ್ ಸಿಗದೆ ಇದ್ದರೂ ಅಸ್ನೋಟಿಕರ್ ಸ್ವತಂತ್ರ. ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದರು. ಈ ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಪ್ರಕಾಶ ಹರಿಕಂತ್ರ, ಕೃಷ್ಣಾ ತಾಂಡೇಲ, ಜ್ಞಾನೇಶ್ವರ ಕೊಳಂಬಕರ, ಕವೀಶ ಬೋಮಕರ, ಗೋಪಾಲ ಹರಿಕಂತ್ರ, ಕೃಷ್ಣಾ ವೈಂಗಣಕರ ಹಾಗೂ ವಿಜಯಾನಂದ ನಾಯ್ಕ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು
