ಶಿರಸಿ: ಕರಾವಳಿ ಮತ್ತು ಮಲೆನಾಡು ಭಾಗವನ್ನು ಸಂಪರ್ಕಿಸುವ ಪ್ರಮುಖ ಮಾರ್ಗವಾದ ದೇವಿಮನೆ ಘಟ್ಟ ಪ್ರದೇಶದಲ್ಲಿ ಶನಿವಾರ ಅಲ್ಪ ಪ್ರಮಾಣದಲ್ಲಿ ಗುಡ್ಡ ಕುಸಿತ ಸಂಭವಿಸಿದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಘಟನೆಯಿಂದಾಗಿ ರಸ್ತೆಗೆ ಮಣ್ಣು ಹಾಗೂ ಮರಗಳು ಉರುಳಿ ಬಿದ್ದಿದ್ದು, ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗಿದೆ ಈ ಭೂಕುಸಿತ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಘಟನಾ ಸ್ಥಳದಲ್ಲಿ ಯಾವುದೇ ತುರ್ತು ರಕ್ಷಣಾ ಸಿಬ್ಬಂದಿ ಬರುವ ಮುನ್ನವೇ, ಅಲ್ಲಿ ಸೇರಿದ್ದ ವಾಹನ ಸವಾರರು ಹಾಗೂ ಸ್ಥಳೀಯ ಸಾರ್ವಜನಿಕರೇ ಸ್ವಯಂಪ್ರೇರಿತರಾಗಿ ರಸ್ತೆಗೆ ಬಿದ್ದಿರುವ ಮರದ ಕೊಂಬೆಗಳನ್ನು ಹಾಗೂ ಮಣ್ಣನ್ನು ತೆರವುಗೊಳಿಸಲು ಹರಸಾಹಸ ಪಡುತ್ತಿದ್ದಾರೆ. ಘಟ್ಟದ ತಿರುವಿನಲ್ಲಿ ಈ ಅವಘಡ ಸಂಭವಿಸಿರುವುದರಿಂದ ರಸ್ತೆಯ ಇಕ್ಕೆಲಗಳಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರಸ್ತುತ ಮಳೆಗಾಲ ತೀವ್ರಗೊಂಡಿರುವುದರಿಂದ ಘಟ್ಟ ಪ್ರದೇಶದ ಮಣ್ಣು ಸಡಿಲಗೊಂಡಿದೆ. ಹೀಗಾಗಿ ಯಾವುದೇ ಕ್ಷಣದಲ್ಲಾದರೂ ಮತ್ತಷ್ಟು ಪ್ರಕೃತಿ ವಿಕೋಪ ಅಥವಾ ಭೂಕುಸಿತ ಸಂಭವಿಸುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ಈ ಮಾರ್ಗವಾಗಿ ಚಲಿಸುವ ಪ್ರಯಾಣಿಕರು ಅತೀವ ಜಾಗೃತೆ ವಹಿಸಬೇಕು. ಘಟ್ಟ ಪ್ರದೇಶದಲ್ಲಿ ಚಲಿಸುವಾಗ ವಾಹನಗಳ ವೇಗ ತೀರಾ ಕಡಿಮೆ ಇರಲಿ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ಅಥವಾ ಅಪಾಯಕಾರಿ ಗುಡ್ಡಗಳ ಕೆಳಗೆ ಅನಗತ್ಯವಾಗಿ ವಾಹನ ನಿಲ್ಲಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
