ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Uttara-Kannada

ಕೈದಿಗಳ ಕೈಯಲ್ಲಿ ಅರಳುತ್ತಿದೆ ಹೊಸ ಭರವಸೆ!

Pakka News Web • 5 ಜುಲೈ 2026,

ಜೈಲಿನ ಕಂಬಿಗಳ ಹಿಂದೆ ಕೇವಲ ಅಪರಾಧದ ಕಪ್ಪು ಕಲೆ ಮತ್ತು ಪಶ್ಚಾತ್ತಾಪದ ಕಣ್ಣೀರು ಮಾತ್ರವಿರುತ್ತದೆ ಎಂಬ ಸಾರ್ವತ್ರಿಕ ನಂಬಿಕೆಯನ್ನು ಕಾರವಾರದ ಜಿಲ್ಲಾ ಕಾರಾಗೃಹವು ಸಂಪೂರ್ಣವಾಗಿ ಸುಳ್ಳಾಗಿಸಿದೆ. ನಾಲ್ಕು ಗೋಡೆಗಳ ಮಧ್ಯೆ ನಕಾರಾತ್ಮಕ ಯೋಚನೆಗಳು, ಆಕ್ರೋಶ ಮತ್ತು ಖಿನ್ನತೆಯಲ್ಲೇ ದಿನ ದೂಡುತ್ತಿದ್ದ ಕೈದಿಗಳ ಕೈಗಳು ಈಗ ಸಮಾಜವೇ ನಿಬ್ಬೆರಗಾಗುವಂತಹ ಸುಂದರ ಕಲಾಕೃತಿಗಳನ್ನು ಸೃಷ್ಟಿಸುತ್ತಿವೆ. ಕಬ್ಬಿಣದ ಸರಳುಗಳ ಹಿಂದೆಯೂ ಸೃಜನಶೀಲ ಮನಸ್ಸುಗಳು ಧನಾತ್ಮಕವಾಗಿ ಯೋಚಿಸಬಲ್ಲವು ಎಂಬುದಕ್ಕೆ ಕಾರವಾರ ಜೈಲಿನ ಈ ಪರಿವರ್ತನೆಯೇ ಸಾಕ್ಷಿ. ಜೈಲು ಎಂದರೆ ಕೇವಲ ಶಿಕ್ಷಿಸುವ ಸ್ಥಳವಲ್ಲ, ಅದೊಂದು ಬದುಕನ್ನು ತಿದ್ದಿ ಮುನ್ನಡೆಸುವ ‘ಸುಧಾರಣಾ ಗೃಹ’ ಎಂಬುದನ್ನು ಇಲ್ಲಿನ ೨೫ ಕೈದಿಗಳು ತಮ್ಮ ಕೌಶಲ್ಯದ ಮೂಲಕ ಜಗತ್ತಿಗೆ ಸಾರುತ್ತಿದ್ದಾರೆ.

ತಪ್ಪೋ, ಒಪ್ಪೋ ಮಾಡಿದ ಅಪರಾಧಕ್ಕೆ ಜೈಲು ಸೇರಿದಾಗ ಮನಸ್ಸನ್ನು ಆವರಿಸುವ ಆತಂಕವನ್ನು ದೂರ ಮಾಡಲು ಕಾರಾಗೃಹ ಇಲಾಖೆಯು ಕೌಶಲ್ಯಾಭಿವೃದ್ಧಿ ಎಂಬ ಸಂಜೀವಿನಿಯನ್ನು ನೀಡಿದೆ. ಜೈಲಿನ ಚೌಕಟ್ಟಿನೊಳಗೇ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಪಡೆದ ಈ ಕೈದಿಗಳು ಇಂದು ಮಾರುಕಟ್ಟೆಯ ಬ್ರ್ಯಾಂಡೆಡ್ ಉತ್ಪನ್ನಗಳಿಗೂ ಪೈಪೋಟಿ ನೀಡುವಂತಹ ಪರಿಸರ ಸ್ನೇಹಿ ಕೈಚೀಲಗಳು, ಗೃಹೋಪಯೋಗಿ ವಸ್ತುಗಳು, ಮಣ್ಣಿನ ಕಲಾಕೃತಿಗಳು ಹಾಗೂ ಆಕರ್ಷಕ ವರ್ಣಚಿತ್ರಗಳನ್ನು ಸಿದ್ಧಪಡಿಸುತ್ತಿದ್ದಾರೆ. ಪ್ಲಾಸ್ಟಿಕ್ ಮುಕ್ತ ಸಮಾಜದ ನಿರ್ಮಾಣಕ್ಕೆ ಪೂರಕವಾಗಿ ಇವರು ತಯಾರಿಸುತ್ತಿರುವ ವಿವಿಧ ಗಾತ್ರದ ಬಟ್ಟೆಯ ಬ್ಯಾಗುಗಳು ಮತ್ತು ಕಾಗದದ ಕವರ್‌ಗಳು ಕಚೇರಿ ಹಾಗೂ ದಿನನಿತ್ಯದ ಬಳಕೆಗೆ ಯೋಗ್ಯವಾಗಿದ್ದು, ನೋಡುಗರ ಗಮನ ಸೆಳೆಯುತ್ತಿವೆ. ಇತ್ತೀಚೆಗಷ್ಟೇ ಜೈಲಿಗೆ ಭೇಟಿ ನೀಡಿದ್ದ ಕೆ.ಎಸ್.ಎಂ.ಸಿ.ಎ ಅಧ್ಯಕ್ಷರು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೈದಿಗಳ ಈ ಅದ್ಭುತ ಕರಕುಶಲತೆಗೆ ಮನಸಾರೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸೃಜನಾತ್ಮಕ ಕಾಯಕವು ಕೈದಿಗಳ ಮನಸ್ಸನ್ನು ನಿರಾಳವಾಗಿಸುವುದಷ್ಟೇ ಅಲ್ಲದೆ, ಅವರ ಭವಿಷ್ಯಕ್ಕೂ ಭದ್ರ ಬುನಾದಿ ಹಾಕುತ್ತಿದೆ. ಇವರು ತಯಾರಿಸುವ ವಸ್ತುಗಳ ಮಾರಾಟದಿಂದ ಬರುವ ಆದಾಯದ ಒಂದು ನಿರ್ದಿಷ್ಟ ಭಾಗವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತಿದೆ. ಇದರಿಂದಾಗಿ ಅವರು ಜೈಲಿನಲ್ಲಿದ್ದೂ ತಮ್ಮ ಕುಟುಂಬಕ್ಕೆ ಆರ್ಥಿಕ ಆಸರೆಯಾಗುತ್ತಿದ್ದಾರೆ. ಇಷ್ಟೇ ಅಲ್ಲದೆ, ಶಿಕ್ಷೆ ಮುಗಿದು ಕತ್ತಲೆಯ ಕೋಣೆಯಿಂದ ಹೊರಬರುವಾಗ ಶೂನ್ಯದಿಂದ ಹೊಸ ಬದುಕು ಕಟ್ಟಿಕೊಳ್ಳಲು ಮತ್ತು ಸಮಾಜದಲ್ಲಿ ಗೌರವಾನ್ವಿತವಾಗಿ ಸ್ವಾವಲಂಬಿ ಜೀವನ ನಡೆಸಲು ಈ ಹಣವು ಆರಂಭಿಕ ಬಂಡವಾಳವಾಗಲಿದೆ. ಕಾರಾಗೃಹದಲ್ಲಿ ಕೇವಲ ವಸ್ತುಗಳ ಉತ್ಪಾದನೆಯಾಗುತ್ತಿಲ್ಲ, ಬದಲಿಗೆ ಅವರ ಮನಃ ಪರಿವರ್ತನೆಯಾಗುತ್ತಿದೆ ಎಂಬುದಕ್ಕೆ ಇಲ್ಲಿನ ಬಣ್ಣ ಬಣ್ಣದ ಹೂವಿನ ತೋಟಗಳೇ ಸಾಕ್ಷಿ. ಮುಂಬರುವ ದಿನಗಳಲ್ಲಿ ಹೂವಿನ ಉತ್ಪನ್ನಗಳಿಗೆ ಕಚ್ಚಾ ವಸ್ತುವಾಗಿ ಹೂವುಗಳನ್ನು ಪೂರೈಸುವ ದೊಡ್ಡ ಗುರಿಯನ್ನೂ ಈ ಜೈಲು ಹೊಂದಿದೆ.

ಸುಧಾರಣೆಯೊಂದಿಗೆ ಭವಿಷ್ಯದ ನಿರ್ಮಾಣ ಎಂಬ ಘೋಷವಾಕ್ಯದೊಂದಿಗೆ ಬಂಧಿಗಳಲ್ಲಿನ ಸ್ಥಳೀಯ ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಅವರ ಸ್ವ-ಇಚ್ಛೆಯ ಮೇರೆಗೆ ತರಬೇತಿ ನೀಡಲಾಗುತ್ತಿದೆ. ಕೈದಿಗಳು ನಮ್ಮ ನಿರೀಕ್ಷೆಗೂ ಮೀರಿ ಉತ್ತಮ ಗುಣಮಟ್ಟದ ವಸ್ತುಗಳನ್ನು ತಯಾರಿಸುತ್ತಿದ್ದು, ಎಷ್ಟೇ ಬೇಡಿಕೆ ಬಂದರೂ ಪೂರೈಸಲು ನಾವು ಸಿದ್ಧರಿದ್ದೇವೆ. ಇಲ್ಲಿನ ಗಳಿಕೆಯು ಅವರು ಬಿಡುಗಡೆಯಾದ ನಂತರ ಸ್ವ ಉದ್ಯಮ ಆರಂಭಿಸಲು ನೆರವಾಗಲಿದೆ ಎನ್ನುತ್ತಾರೆ. ಕಾರವಾರದ ಜಿಲ್ಲಾ ಕಾರಾಗೃಹದ ಅಧೀಕ್ಷಕಿ ಹೇಮಾವತಿ. ಜಿ.

ಒಟ್ಟಾರೆಯಾಗಿ, ಕಾರಾಗೃಹ ಇಲಾಖೆಯ ಡಿಜಿಪಿ ಅವರ ನಿರ್ದೇಶನ ಹಾಗೂ ಉತ್ತರ ವಲಯದ ಡಿಐಜಿಪಿ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ಮಹತ್ತರ ಕಾರ್ಯಕ್ರಮವು ಅಪರಾಧದ ಕಪ್ಪು ಚುಕ್ಕೆಯನ್ನು ಅಳಿಸಿ ಸಮಾಜದ ಮುಖ್ಯವಾಹಿನಿಗೆ ಬರಲು ಕೈದಿಗಳಿಗೆ ಎರಡನೇ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಸರ್ಕಾರದ ಈ ಸತ್ಪ್ರಯತ್ನ ಸಂಪೂರ್ಣ ಯಶಸ್ವಿಯಾಗಬೇಕಾದರೆ ಸಾರ್ವಜನಿಕರ ಸಹಭಾಗಿತ್ವವೂ ಅತಿ ಮುಖ್ಯವಾಗಿದೆ. ಜೈಲಿನ ಕೈದಿಗಳು ಸಿದ್ಧಪಡಿಸಿದ ಈ ಉತ್ಪನ್ನಗಳನ್ನು ಖರೀದಿಸುವುದು ಎಂದರೆ ಕೇವಲ ಒಂದು ವಸ್ತುವನ್ನು ಕೊಂಡಂತಲ್ಲ; ಬದಲಿಗೆ, ಕತ್ತಲೆಯಿಂದ ಬೆಳಕಿನೆಡೆಗೆ ಸಾಗುತ್ತಿರುವ ಒಂದು ಜೀವದ ಪಯಣಕ್ಕೆ ಹಾಗೂ ಅಪರಾಧ ಮುಕ್ತ ನಾಳೆಯ ನಿರ್ಮಾಣಕ್ಕೆ ಪ್ರತಿಯೊಬ್ಬ ನಾಗರಿಕನೂ ಹೆಗಲು ಕೊಟ್ಟಂತಾಗುತ್ತದೆ.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250