ಕಾರವಾರ: ನಗರದ ಹಳೇ ಕೆ.ಎಚ್.ಬಿ ರಸ್ತೆಯ ಮಾರುತಿ ದೇವಸ್ಥಾನದ ಪಕ್ಕದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಇದೀಗ ಸಾರ್ವಜನಿಕ ಆರೋಗ್ಯದ ಗಂಭೀರ ಆತಂಕಕ್ಕೆ ಕಾರಣವಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ನಗರಸಭೆ ನಿರ್ಮಿಸಿದ ಈ ನೀರಿನ ಘಟಕದ ಸುತ್ತಮುತ್ತಲೇ ಒಳಚರಂಡಿ ನೀರು ಉಕ್ಕಿ ಹರಿಯುತ್ತಿರುವ ಪರಿಣಾಮ, ಜನರು ಕಲುಷಿತ ನೀರಿನಲ್ಲೇ ನಡೆದು ಕುಡಿಯುವ ನೀರು ತರುವ ದುಸ್ಥಿತಿ ಎದುರಿಸುತ್ತಿದ್ದಾರೆ.
ಮಳೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಘಟಕದ ಸಮೀಪದ ಒಳಚರಂಡಿ ಕಸ-ಕಡ್ಡಿಗಳಿಂದ ಬ್ಲಾಕ್ ಆಗಿದ್ದು, ದುರ್ವಾಸನೆ ಬೀರುವ ಕಪ್ಪು ಬಣ್ಣದ ಕೊಳಚೆ ನೀರು ರಸ್ತೆಯ ಮೇಲೆ ಹರಡಿದೆ. ಇದೇ ಮಾರ್ಗದಿಂದ ದಿನನಿತ್ಯ ನೂರಾರು ಜನರು ನೀರು ತೆಗೆದುಕೊಂಡು ಹೋಗಬೇಕಾಗಿರುವುದು ಸ್ಥಳೀಯರಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿರುವ ನಗರಸಭೆಯೇ, ಅದೇ ಸ್ಥಳವನ್ನು ಕೊಳಚೆ ನೀರಿನ ಕೆರೆಯಾಗಿ ಬದಲಾಯಿಸಿರುವಂತಾಗಿದೆ ಎಂಬ ಟೀಕೆ ಸಾರ್ವಜನಿಕರಿಂದ ಕೇಳಿಬರುತ್ತಿದೆ.

ಸ್ಥಳೀಯರ ಪ್ರಕಾರ, ನೀರಿನ ಘಟಕದ ಸುತ್ತಲಿನ ಪರಿಸ್ಥಿತಿ ದಿನದಿಂದ ದಿನಕ್ಕೆ ಮತ್ತಷ್ಟು ಹದಗೆಡುತ್ತಿದೆ. ಜನರು ಕಾಲಿಗೆ ಚರಂಡಿ ನೀರು ತಾಗಿಸಿಕೊಂಡೇ ಮನೆಗೆ ನೀರು ಒಯ್ಯಬೇಕಾದ ಸ್ಥಿತಿ ನಿರ್ಮಾಣವಾಗಿದ್ದು, ಮಳೆ ಹೆಚ್ಚಾದರೆ ಈ ನೀರು ಇನ್ನಷ್ಟು ವ್ಯಾಪಿಸಿ ಜನವಸತಿ ಪ್ರದೇಶಕ್ಕೂ ನುಗ್ಗುವ ಭೀತಿ ಎದುರಾಗಿದೆ. ಕೇವಲ ದುರ್ವಾಸನೆ ಅಥವಾ ಅಸೌಕರ್ಯಕ್ಕಷ್ಟೇ ಇದು ಸೀಮಿತವಾಗಿಲ್ಲ. ನೀರಿನ ಘಟಕದ ಸುತ್ತ ನಿಂತಿರುವ ಕೊಳಚೆ ನೀರು ಸೊಳ್ಳೆ, ನೊಣಗಳ ಉತ್ಪತ್ತಿಗೆ ಕಾರಣವಾಗಿ ಸಾಂಕ್ರಾಮಿಕ ರೋಗಗಳ ಅಪಾಯವನ್ನು ಹೆಚ್ಚಿಸುತ್ತಿದೆ.
ಮಳೆಯಾಗವಾಗಿದ್ರಿಂದ ಡೆಂಗ್ಯೂ, ಚಿಕೂನ್‌ಗುನ್ಯಾ, ಕಾಲರಾ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳ ಭೀತಿ ಆವರಿಸಿರುವ ಸಂದರ್ಭದಲ್ಲಿ, ಶುದ್ಧ ನೀರಿನ ಘಟಕದ ಪಕ್ಕದಲ್ಲೇ ಈ ರೀತಿಯ ಅಸ್ವಚ್ಛ ಪರಿಸ್ಥಿತಿ ನಿರ್ಮಾಣವಾಗಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಕೊಳಚೆ ನೀರು ಒಂದಲ್ಲೊಂದು ರೀತಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆಗೆ ತಾಗಿದರೆ, ಅದರ ಪರಿಣಾಮ ಗಂಭೀರವಾಗಬಹುದು ಎಂಬ ಭಯವೂ ವ್ಯಕ್ತವಾಗಿದೆ.
ನಗರಸಭೆ ಕೇವಲ ಸಾರ್ವಜನಿಕರ ಆರೋಗ್ಯಕ್ಕೆ ನೇರ ಅಪಾಯ ಉಂಟುಮಾಡುವ ಈ ಸಮಸ್ಯೆಯನ್ನು ಅಧಿಕಾರಿಗಳು ತುರ್ತುವಾಗಿ ಪರಿಗಣಿಸಿ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂಬ ಆಗ್ರಹ ಕೇಳಿಬಂದಿದೆ. ಬ್ಲಾಕ್ ಆಗಿರುವ ಒಳಚರಂಡಿಯನ್ನು ತಕ್ಷಣ ಸ್ವಚ್ಛಗೊಳಿಸಿ, ನೀರಿನ ಘಟಕದ ಸುತ್ತಮುತ್ತ ಕ್ರಿಮಿನಾಶಕ ಹಾಗೂ ಸೊಳ್ಳೆ ನಿವಾರಕ ಔಷಧ ಸಿಂಪಡಿಸಿ, ಮತ್ತಷ್ಟು ಕಲುಷಿತ ನೀರು ರಸ್ತೆಗೆ ಹರಿಯದಂತೆ ಶಾಶ್ವತ ಪರಿಹಾರ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
