ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Uttara-Kannada

ಸತತ ಮಳೆ ರಸ್ತೆ ಕುಸಿತ: ಹೆಚ್ಚಿದ ಆತಂಕ

Pakka News Web • 5 ಜುಲೈ 2026,

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ರಾಮನಗರದ ಗಣೇಶ್ ಗಲ್ಲಿಗೆ ಹೋಗುವ ಮುಖ್ಯ ರಸ್ತೆಯು ಮತ್ತೊಮ್ಮೆ ಕುಸಿದಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಇತ್ತೀಚೆಗಷ್ಟೇ ರಸ್ತೆ ಕುಸಿದ ಭಾಗದಲ್ಲಿ ಸಂಚರಿಸುತ್ತಿದ್ದ ಕಾರೊಂದು ಅದರಲ್ಲಿ ಸಿಲುಕಿಕೊಂಡು ಜಖಂಗೊಂಡಿರುವ ಘಟನೆ ಬೆಳಕಿಗೆ ಬಂದಿದ್ದು, ರಸ್ತೆಯ ದುಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.

ವಿಷಾದನೀಯ ಸಂಗತಿಯೆಂದರೆ, ಕಳೆದ ಮೂರು ವರ್ಷಗಳಿಂದಲೂ ಇದೇ ಸ್ಥಳದಲ್ಲಿ ರಸ್ತೆ ಕುಸಿಯುವ ಸಮಸ್ಯೆ ಮರುಕಳಿಸುತ್ತಲೇ ಇದೆ. ಕಳೆದ ವರ್ಷ ಇದೇ ಜಾಗದಲ್ಲಿ ಟ್ರ್ಯಾಕ್ಟರ್ ಸಿಲುಕಿಕೊಂಡಿದ್ದರೆ, ಅದಕ್ಕೂ ಹಿಂದಿನ ವರ್ಷ ಟಿಪ್ಪರ್ ಒಂದು ಸಿಲುಕಿತ್ತು. ಈ ವರ್ಷ ಕಾರು ಅಪಘಾತಕ್ಕೀಡಾಗಿದ್ದು, ಸ್ಥಳೀಯ ನಿವಾಸಿಗಳ ಭಯವನ್ನು ಮತ್ತಷ್ಟು ಹೆಚ್ಚಿಸಿದೆ.

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ

ಈ ಅಪಾಯಕಾರಿ ರಸ್ತೆಯ ಕುರಿತು ಸ್ಥಳೀಯರು ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರೂ ಸಹ, ಅವರು ಕೇವಲ ತಾತ್ಕಾಲಿಕ ದುರಸ್ತಿ ಕಾರ್ಯವನ್ನು ಮಾಡಿ ಕೈತೊಳೆದುಕೊಳ್ಳುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಮಾರ್ಗದಲ್ಲಿ ನಿತ್ಯವೂ ಶಾಲಾ ಮಕ್ಕಳ ಬಸ್ ಸೇರಿದಂತೆ ನೂರಾರು ವಾಹನಗಳು ಸಂಚರಿಸುತ್ತಿರುವುದರಿಂದ, ಯಾವುದೇ ಕ್ಷಣದಲ್ಲೂ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆಯಿದೆ.

 ದೊಡ್ಡ ದುರಂತವೊಂದು ಸಂಭವಿಸುವ ಮುನ್ನವೇ ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಂಡು, ಈ ರಸ್ತೆಗೆ ಶಾಶ್ವತ ತಡೆಗೋಡೆ ಹಾಗೂ ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು ಎಂದು ಸ್ಥಳೀಯರು ತೀವ್ರವಾಗಿ ಒತ್ತಾಯಿಸಿದ್ದಾರೆ. ಇನ್ನು ರಾತ್ರಿ ವೇಳೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ರಸ್ತೆ ಕುಸಿದಿರುವುದು ತಿಳಿಯದೆ ಪ್ರಾಣಾಪಾಯ ಉಂಟಾಗಬಾರದು ಎಂಬ ನಿಟ್ಟಿನಲ್ಲಿ, ಸ್ಥಳೀಯ ನಿವಾಸಿಯಾದ ದೀಪಕ್ ದುಗಾಣೆ ಅವರು ಕುಸಿದ ಜಾಗದಲ್ಲಿ ಕಡ್ಡಿಗಳನ್ನು ನೆಟ್ಟು ತಾತ್ಕಾಲಿಕವಾಗಿ ಎಚ್ಚರಿಕೆ ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಸದ್ಯಕ್ಕಂತೂ ಈ ರಸ್ತೆ ರಾಮನಗರದ ಜನರಿಗೆ ಮೃತ್ಯುಕೂಪದಂತೆ ಭಾಸವಾಗುತ್ತಿದ್ದು, ಆಡಳಿತ ಮಂಡಳಿ ತಕ್ಷಣವೇ ಕಾರ್ಯಪ್ರವೃತ್ತರಾಗಬೇಕಿದೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250