ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Uttara-Kannada

ಎನ್ಯುಮರೇಷನ್ ಫಾರ್ಮ್ ಭರ್ತಿಯಲ್ಲಿ ಗೊಂದಲವೇ? ಹೀಗೆ ಮಾಡಿ!

Pakka News Web • 11 ಜುಲೈ 2026,

ಕಾರವಾರ: ಜಿಲ್ಲೆಯ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಕಾರ್ಯದ ಅಂಗವಾಗಿ ಮನೆ ಮನೆಗೆ ವಿತರಿಸಲಾಗುತ್ತಿರುವ ಎನ್ಯುಮರೇಷನ್ ಫಾರ್ಮ್‌ಗಳಲ್ಲಿ ಶೇ.99ಕ್ಕೂ ಹೆಚ್ಚು ಮತದಾರರಿಗೆ ಈಗಾಗಲೇ ಫಾರ್ಮ್‌ಗಳನ್ನು ತಲುಪಿಸಲಾಗಿದೆ. ಫಾರ್ಮ್ ಭರ್ತಿ ಮಾಡುವ ವೇಳೆ ಯಾವುದೇ ಗೊಂದಲ ಅಥವಾ ಸಮಸ್ಯೆ ಎದುರಾದರೆ ಮತದಾರರು ಉಚಿತ ಸಹಾಯವಾಣಿ 08382-1950 ಸಂಪರ್ಕಿಸಿ ಅಗತ್ಯ ಮಾಹಿತಿ ಹಾಗೂ ಮಾರ್ಗದರ್ಶನ ಪಡೆಯಬಹುದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮತದಾರರಿಗೆ ನೆರವಾಗುವ ಉದ್ದೇಶದಿಂದ ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ ಮತದಾರರ ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳಲ್ಲಿ ಎನ್ಯುಮರೇಷನ್ ಫಾರ್ಮ್ ಭರ್ತಿ ಮಾಡಲು ಅಗತ್ಯ ಸಹಾಯ ದೊರೆಯಲಿದ್ದು, ಮತದಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿದ್ದು, ಪ್ರಸ್ತುತ ಬೇರೆಡೆಗೆ ವಲಸೆ ಹೋಗಿರುವ ಮತದಾರರ ಮನೆಗಳಿಗೂ ಫಾರ್ಮ್‌ಗಳನ್ನು ವಿತರಿಸಲಾಗಿದೆ. ಅಂತಹವರು ಆನ್‌ಲೈನ್ ಮೂಲಕವೂ ಫಾರ್ಮ್ ಭರ್ತಿ ಮಾಡಿ ಸಲ್ಲಿಸಬಹುದಾಗಿದೆ. ಬಳಿಕ ಕರಡು ಮತದಾರರ ಪಟ್ಟಿ ಪ್ರಕಟವಾದ ನಂತರ ಅಗತ್ಯವಿದ್ದರೆ ತಮ್ಮ ಹೆಸರನ್ನು ಸಂಬಂಧಿತ ಕ್ಷೇತ್ರಕ್ಕೆ ವರ್ಗಾವಣೆ ಮಾಡಿಸಿಕೊಳ್ಳಲು ಅವಕಾಶವಿದೆ ಎಂದು ಅವರು ತಿಳಿಸಿದರು.

ಎನ್ಯುಮರೇಷನ್ ಫಾರ್ಮ್ ಪಡೆದಿರುವ ಪ್ರತಿಯೊಬ್ಬ ಮತದಾರರೂ ಅದನ್ನು ಕಡ್ಡಾಯವಾಗಿ ಭರ್ತಿ ಮಾಡಿ ಹಿಂದಿರುಗಿಸಬೇಕು ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಕಾರ್ಯದ ಪ್ರಗತಿ ಕುರಿತು ಎಲ್ಲಾ ರಾಜಕೀಯ ಪಕ್ಷಗಳಿಗೆ ನಿಯಮಿತವಾಗಿ ಮಾಹಿತಿ ನೀಡಲಾಗುತ್ತಿದೆ. ಮನೆ-ಮನೆ ಭೇಟಿ ವೇಳೆ ಪತ್ತೆಯಾಗಿರುವ ಸ್ಥಳಾಂತರ, ಮರಣ, ದ್ವಿಪ್ರತಿ ಹೆಸರು ಸೇರಿದಂತೆ ಇತರೆ ವಿವರಗಳನ್ನು ಪಕ್ಷಗಳ ಬೂತ್ ಮಟ್ಟದ ಏಜೆಂಟ್‌ಗಳು (ಬಿ.ಎಲ್.ಎ.) ಪರಿಶೀಲಿಸಿ, ಯಾವುದೇ ಗೊಂದಲಗಳಿದ್ದರೆ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಿಕೊಳ್ಳುವಂತೆ ಅವರು ಸೂಚಿಸಿದರು. ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಯಶಸ್ವಿಯಾಗಲು ಎಲ್ಲ ರಾಜಕೀಯ ಪಕ್ಷಗಳು ಸಂಪೂರ್ಣ ಸಹಕಾರ ನೀಡಬೇಕು ಎಂದು ಅವರು ಕೋರಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಕೆ. ಶಂಭುಶೆಟ್ಟಿ, ಸಿ.ಪಿ.ಐ.(ಎಂ)ನ ಶಾಂತಾರಾಮ ನಾಯಕ್, ಸಿ.ಪಿ.ಎಂನ ಯಮುನಾ ಗಾಂವಕರ್, ಬಿಜೆಪಿಯ ಎನ್.ಎಸ್. ಹೆಗಡೆ, ಜೆಡಿಎಸ್‌ನ ಸೂರಜ್ ನಾಯ್ಕ ಸೋನಿ, ಉದಯ ಭೋವಿ, ಚುನಾವಣಾ ಶಾಖೆಯ ಶಿರಸ್ತೇದಾರ್ ಶೇಖ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250