ಗೋಕರ್ಣ: ಪುರಾಣ ಪ್ರಸಿದ್ಧ ಶ್ರೀ ಮಹಾಬಲೇಶ್ವರ ದೇವಾಲಯದ ಗರ್ಭಗುಡಿಗೆ ಮಳೆಗಾಲದಲ್ಲಿ ಕೊಳಚೆ ನೀರು ನುಗ್ಗುತ್ತಿರುವ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಣ್ಣ ನೀರಾವರಿ ಇಲಾಖೆಗೆ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.
ದೇವಾಲಯದ ಅಭಿಷೇಕದ ತೀರ್ಥ ಹೊರಹೋಗುವ ಸೋಮಸೂತ್ರವು ಸಂಗಮ ನಾಲೆಗೆ ಸೇರುವ ಸ್ಥಳದಲ್ಲಿ ಗೇಟ್ ವಾಲ್ವ್ ಅಳವಡಿಸಿ, ಮಳೆಗಾಲದಲ್ಲಿ ಹೊರಗಿನ ಕೊಳಚೆ ನೀರು ದೇವಾಲಯದ ಒಳಭಾಗಕ್ಕೆ ಪ್ರವೇಶಿಸದಂತೆ ಶಾಶ್ವತ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಗಿದೆ.
ಈ ಸಂಬಂಧ ಪರಿವರ್ತನ ಗೋಕರ್ಣ ಸಂಸ್ಥೆ ಸಲ್ಲಿಸಿದ್ದ ಮನವಿ ಪತ್ರ ಹಾಗೂ ದೇವಾಲಯದೊಳಗೆ ಕೊಳಚೆ ನೀರು ನಿಂತಿರುವ ಚಿತ್ರಗಳನ್ನು ಪರಿಶೀಲಿಸಿದ ಮುಖ್ಯಮಂತ್ರಿ, ಈ ಕಾಮಗಾರಿಯನ್ನು ತುರ್ತು ಅಗತ್ಯದ ಕೆಲಸವೆಂದು ಪರಿಗಣಿಸಿ ಕೂಡಲೇ ಕೈಗೆತ್ತಿಕೊಳ್ಳಿ ಎಂದು ಮನವಿ ಪತ್ರದ ಮೇಲೆಯೇ ಸೂಚನೆ ಬರೆದಿದ್ದಾರೆ.
ಇತ್ತೀಚೆಗೆ ಮಳೆಗಾಲ ಆರಂಭವಾದ ಬಳಿಕ ಎರಡು ಬಾರಿ ಮಹಾಬಲೇಶ್ವರ ದೇವಾಲಯದ ಗರ್ಭಗುಡಿಗೆ ನೀರು ನುಗ್ಗಿ ಭಕ್ತರು ಹಾಗೂ ದೇವಾಲಯ ಆಡಳಿತಕ್ಕೆ ತೊಂದರೆಯಾದ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳನ್ನು ಗಮನಿಸಿದ ಮುಖ್ಯಮಂತ್ರಿ, ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಈ ಕುರಿತು ಚರ್ಚೆ ನಡೆಸಿದರು.
ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯ ಕಾರ್ಯದರ್ಶಿ ನಿವೇದಿತ್ ಆಳ್ವಾ ಉಪಸ್ಥಿತರಿದ್ದು, ದೇವಾಲಯ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳಿಗೆ ವಿವರಿಸಿದರು. ಇದೇ ವೇಳೆ ಮಾಜಿ ಸಚಿವ ಹಾಗೂ ಭಟ್ಕಳ ಶಾಸಕ ಮಂಕಾಳ ವೈದ್ಯ, ಗೋಕರ್ಣದ ರಸ್ತೆ ಅಭಿವೃದ್ಧಿ ಹಾಗೂ ಕೋಟಿತೀರ್ಥ ಅಭಿವೃದ್ಧಿ ಯೋಜನೆಗಳ ವಿಷಯವನ್ನೂ ಮುಖ್ಯಮಂತ್ರಿ ಗಮನಕ್ಕೆ ತಂದರು. ಹಲವು ಬಾರಿ ಗೋಕರ್ಣಕ್ಕೆ ಭೇಟಿ ನೀಡಿ ಶ್ರೀ ಮಹಾಬಲೇಶ್ವರ ದೇವರ ದರ್ಶನ ಪಡೆದಿರುವ ಮುಖ್ಯಮಂತ್ರಿ, ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗದಂತೆ ಗೇಟ್ ವಾಲ್ವ್ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ನಿವೇದಿತ್ ಆಳ್ವಾ, ಗೋಕರ್ಣ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಆರಂಭದಿಂದಲೂ ವಿಶೇಷ ಕಾಳಜಿ ಇದ್ದು, ಮೊದಲ ಹಂತವಾಗಿ ದೇವಾಲಯಕ್ಕೆ ಎದುರಾಗಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಮಾಜಿ ಸಚಿವ ಹಾಗೂ ಭಟ್ಕಳ ಶಾಸಕ ಮಂಕಾಳ ವೈದ್ಯ ಮಾತನಾಡಿ, ಮುಖ್ಯಮಂತ್ರಿಗಳ ನಿರ್ದೇಶನದಂತೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಲಿದ್ದು, ಮುಂದಿನ ದಿನಗಳಲ್ಲಿ ಗೋಕರ್ಣ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಲಾಗುವುದು. ಈ ಅಭಿವೃದ್ಧಿ ಕಾರ್ಯಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
