ಗರ್ಭಧಾರಣಾ ಪೂರ್ವ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ ತಡೆಯುವ ಕಾಯ್ದೆಯನ್ನು ಜಿಲ್ಲೆಯಲ್ಲಿ ಅತ್ಯಂತ ಕಟ್ಟುನಿಟ್ಟಾಗಿ ಜಾರಿಗೊಳಿಸಲು, ನೋಂದಾಯಿತ ಪ್ರತಿಯೊಂದು ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲೆಯೂ ನಿಯಮಿತವಾಗಿ ಹಾಗೂ ಸಮಗ್ರವಾಗಿ ನಿಗಾ ವಹಿಸುವಂತೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅವರು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು.
ಕಾರವಾರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಗರ್ಭಧಾರಣಾ ಪೂರ್ವ ಮತ್ತು ಪ್ರಸವ ಪೂರ್ವ ಪತ್ತೆ ತಂತ್ರ ವಿಧಾನಗಳ (PCPNDT) ಸಕ್ಷಮ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಸ್ತುತ ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ 82 ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಅಧಿಕಾರಿಗಳು ನಿರಂತರವಾಗಿ ದಿಢೀರ್ ಭೇಟಿ ನೀಡಬೇಕು.
ಪರಿಶೀಲನೆಯ ಸಂದರ್ಭದಲ್ಲಿ ಕೇಂದ್ರಗಳ ಅಗತ್ಯ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸುವುದರ ಜೊತೆಗೆ, ಅಲ್ಲಿ ಯಾವುದೇ ರೀತಿಯಲ್ಲಿ ಅನಧಿಕೃತ ಲಿಂಗ ಪತ್ತೆ ನಡೆಯುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ತಾಕೀತು ಮಾಡಿದರು. ಕೇವಲ ತಪಾಸಣೆಗೆ ಸೀಮಿತವಾಗದೆ, ಭೇಟಿ ನೀಡಿದ ಸ್ಥಳದ ಜಿಪಿಎಸ್ ಆಧಾರಿತ ಫೋಟೋಗಳೊಂದಿಗೆ ದೃಢೀಕರಿಸಿದ ಸಮಗ್ರ ವರದಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕೆಂದು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸಂಜಯ್ ದೊಡ್ಡಮನಿ, ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಡಾ. ನರೇಶ ಪಾವಸ್ಕರ, ಸದಸ್ಯರಾದ ಡಾ. ಪವನ ಕುಮಾರ್, ಜಿಲ್ಲಾ ವಾರ್ತಾಧಿಕಾರಿ ಬಿ. ಶಿವಕುಮಾರ್, ವಕೀಲೆ ಸುಧಾರಾಣಿ, ಸಾಮಾಜಿಕ ಕಾರ್ಯಕರ್ತೆ ಯಶೋಧ ಹೆಗಡೆ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವಿನಿ ಬೋರಕರ, ಡಾ. ಆಶಿತಾ ಹಾಗೂ ರೋಟರಿ ಕ್ಲಬ್‌ನ ಹೇಮ್ಲಾ ಅಲ್ಫಾನ್ಸೋ ಉಪಸ್ಥಿತರಿದ್ದರು.
