ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Uttara-Kannada

ಮರೆಯಾಯ್ತು ಯಕ್ಷರಂಗದ ನಗೆಬೆಳಕು: ಶ್ರೀಧರ ಭಟ್ ಕಾಸರಕೋಡ ವಿಧಿವಶ

Pakka News Web • 31 ಜುಲೈ 2026,

ತಮ್ಮ ಸಹಜ ಸಭ್ಯ ನಗೆಯ ಅಭಿನಯದಿಂದಲೇ ದಶಕಗಳ ಕಾಲ ಲಕ್ಷಾಂತರ ಯಕ್ಷಪ್ರೇಕ್ಷಕರ ಮನಸ್ಸನ್ನು ಗೆದ್ದು, ರಂಗಸ್ಥಳದಲ್ಲಿ ನಗೆಯ ಹೊಳೆ ಹರಿಸುತ್ತಿದ್ದ ಅಭಿನಯ ಚತುರ, ‘ಬಡಗುತಿಟ್ಟಿನ ನಗೆಯ ರಾಜ’ ಶ್ರೀಧರ ಭಟ್ ಕಾಸರಕೋಡ (52) ಅವರ ಅಕಾಲಿಕ ನಿಧನದಿಂದ ಯಕ್ಷಗಾನ ಲೋಕ ಶೋಕಸಾಗರದಲ್ಲಿ ಮುಳುಗಿದೆ. ಹೊನ್ನಾವರದ ಸಾಲ್ಕೋಡ್ ಗ್ರಾಮದ ಮುಲ್ಲೆಮಕ್ಕಿಯ ನಿವಾಸಿಯಾಗಿದ್ದ ಅವರು ಶುಕ್ರವಾರ ವಿಧಿವಶರಾಗಿದ್ದು, ಅಪಾರ ಯಕ್ಷಾಭಿಮಾನಿಗಳು, ಕಲಾಪ್ರೇಮಿಗಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಮೂರುವರೆ ದಶಕಗಳ ಕಾಲ ಯಕ್ಷರಂಗಕ್ಕೆ ತಮ್ಮ ಜೀವವನ್ನೇ ಧಾರೆ ಎರೆದಿದ್ದ ಶ್ರೀಧರ ಭಟ್, ಜೋಕಮಾರ ಸ್ವಾಮಿ, ಕುಜ್ಜಿ, ಸೂತ್ರಧಾರಿ ಮುಂತಾದ ಹಾಸ್ಯ ಪಾತ್ರಗಳಿಗೆ ಪ್ರಾಣತುಂಬಿ ನಟಿಸುತ್ತಿದ್ದರು. ಎಲ್ಲೂ ಕೀಳುಮಟ್ಟದ ಅಸಭ್ಯತೆಗೆ ಜಾಗ ನೀಡದೇ, ಸಮಯಪ್ರಜ್ಞೆ, ಕಲಾತ್ಮಕ ತಾಳ್ಮೆ ಹಾಗೂ ಪ್ರೇಕ್ಷಕರ ಮನ ಸೆಳೆಯುವ ವಿಶಿಷ್ಟ ಮಾತುಗಾರಿಕೆಯಿಂದ ಸಭ್ಯ ಹಾಸ್ಯಕ್ಕೊಂದು ಹೊಸ ವ್ಯಾಖ್ಯಾನ ಬರೆದವರು. ಗುಂಡಬಾಳ, ಮಂದಾರ್ತಿ, ಸಾಲಿಗ್ರಾಮ, ಜಲವಳ್ಳಿ ಮೇಳಗಳಲ್ಲಿ ಸೇವೆ ಸಲ್ಲಿಸಿ ಬಡಗುತಿಟ್ಟಿನಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದ ಅವರ ಅಗಲಿಕೆಯಿಂದಾಗಿ ರಂಗಸ್ಥಳದ ಒಂದು ಬೆಳಕು ಕಣ್ಮರೆಯಾದಂತಾಗಿದೆ. ಕಲಾವಿದ ಶ್ರೀಧರ ಭಟ್ ಕಾಸರಕೋಡ ಅವರು ರಂಗಸ್ಥಳದಲ್ಲಿ ಹೊತ್ತಿಸಿ ಹೋದ ನಗೆಯ ಬೆಳಕು, ಯಕ್ಷಾಭಿಮಾನಿಗಳ ಹೃದಯದಲ್ಲಿ ಎಂದೆಂದಿಗೂ ಅಮರ.

ಹಾಸ್ಯ ದಿಗ್ಗಜ ಕುಂಜಾಲು ರಾಮಕೃಷ್ಣರ ನಂತರ ಯಕ್ಷಗಾನದ ಹಾಸ್ಯ ರಂಗಕ್ಕೆ ಕಳೆ ತಂದಿದ್ದ ಈ ಮಹಾನ್ ಕಲಾವಿದನ ಅಗಲಿಕೆಗೆ ಇಡೀ ಸಾಂಸ್ಕೃತಿಕ ಲೋಕ ಕಂಬನಿ ಮಿಡಿದಿದೆ. ಕಲಾಶ್ರೇಷ್ಠರಾದ ವಿದ್ಯಾಧರ ಜಲವಳ್ಳಿ, ಕೆರೆಮನೆ ಶಿವಾನಂದ ಹೆಗಡೆ, ಶಂಕರ ಹೆಗಡೆ ನಿಲ್ಕೋಡ್, ಶಿವಾನಂದ ಹೆಗಡೆ ಕಡತೋಕಾ, ರಾಜು ಭಂಡಾರಿ, ನಾಗರಾಜ ಹೆಗಡೆ ಖಾಸ್ಕಂಡ ಸೇರಿದಂತೆ ಅನೇಕ ದಿಗ್ಗಜರು ತೀವ್ರ ಸಂತಾಪ ಸೂಚಿಸಿದ್ದಾರೆ.

ಯಕ್ಷರಂಗಕ್ಕೆ ತುಂಬಲಾರದ ನಷ್ಟ: ಪ್ರಮುಖರ ಕಂಬನಿ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ್ ಅವರು ಹಿರಿಯ ನಟನ ನಿಧನಕ್ಕೆ ಆಳವಾದ ಶೋಕ ವ್ಯಕ್ತಪಡಿಸಿದ್ದಾರೆ. ಹಾಸ್ಯ ಪಾತ್ರಗಳಿಗೆ ಹೊಸ ಆಯಾಮ ನೀಡಿದ್ದ ಶ್ರೀಧರ ಭಟ್ ಅವರು ಎಂದಿಗೂ ಅಪಹಾಸ್ಯಕ್ಕೆ ಆಸ್ಪದ ನೀಡದೆ, ಸಾಂಸ್ಕೃತಿಕ ಮೌಲ್ಯಗಳನ್ನು ಎತ್ತಿಹಿಡಿದು ಪ್ರೇಕ್ಷಕರನ್ನು ನಗಿಸುತ್ತಿದ್ದರು. ಅವರ ನಿರ್ಗಮನದಿಂದ ಬಡಗು ಯಕ್ಷಗಾನ ಕ್ಷೇತ್ರ ಬಡವಾಗಿದೆ ಎಂದು ಸಂಸದ ಕಾಗೇರಿ ಸ್ಮರಿಸಿದ್ದಾರೆ. ಇತ್ತ ರೂಪಾಲಿ ನಾಯ್ಕ ಅವರು, ತಮ್ಮ ಮೊನಚಾದ ಮಾತು ಹಾಗೂ ಅಗಾಧ ಪ್ರತ್ಯುತ್ಪನ್ನಮತಿಯಿಂದ ಮೂರು ದಶಕಗಳ ಕಾಲ ಮೇಳಗಳನ್ನು ಬೆಳಗಿದ ಶ್ರೀಧರ ಭಟ್ ಅವರು ಯಕ್ಷಗಾನದ ಅಮೂಲ್ಯ ಆಸ್ತಿಯಾಗಿದ್ದರು. ಈ ಕಠಿಣ ಸಮಯದಲ್ಲಿ ಭಗವಂತ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಕಂಬನಿ ಮಿಡಿದಿದ್ದಾರೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250