ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Uttara-Kannada

ಉತ್ತರ ಕನ್ನಡದಲ್ಲಿ ಶೇ.100 ರಷ್ಟು ಸಾಧನೆ!

Pakka News Web • 5 ಆಗಸ್ಟ್ 2026,

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-2026ರ ಪ್ರಕ್ರಿಯೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿದ್ದು, ಸಾರ್ವಜನಿಕರಿಂದ ಸ್ವೀಕರಿಸಲಾದ ಎಲ್ಲಾ ಎನುಮರೇಷನ್ ಫಾರ್ಮ್‌ಗಳನ್ನು ನೂರಕ್ಕೆ ನೂರರಷ್ಟು ಗಣಕೀಕರಣಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.

ಜಿಲ್ಲೆಯಾದ್ಯಂತ ಇರುವ ಒಟ್ಟು 12,30,037 ಮತದಾರರಿಗೂ ಬಿ.ಎಲ್.ಓ (BLO) ಗಳ ಮೂಲಕ ಫಾರ್ಮ್‌ಗಳನ್ನು ವಿತರಿಸಿ, ಸ್ವೀಕೃತವಾದ ಎಲ್ಲಾ ನಮೂನೆಗಳನ್ನು ಯಶಸ್ವಿಯಾಗಿ ಡಿಜಿಟಲೀಕರಣಗೊಳಿಸಲಾಗಿದೆ. ಮನೆ ಮನೆ ಭೇಟಿಯ ಪರಿಶೀಲನೆ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಒಟ್ಟು 1,07,385 ವಿಶೇಷ ಪ್ರಕರಣಗಳನ್ನು ಗುರುತಿಸಲಾಗಿದ್ದು, ಇದರಲ್ಲಿ 45,878 ಶಾಶ್ವತ ವಲಸೆ, 44,006 ಮರಣ ಹೊಂದಿದ ಪ್ರಕರಣಗಳು, 12,463 ದ್ವಿಪ್ರತಿ ಹೆಸರುಗಳು ಹಾಗೂ 5,002 ಗೈರುಹಾಜರಿ ಮತ್ತು 36 ಇತರೆ ಪ್ರಕರಣಗಳು ಸೇರಿವೆ.

ಕ್ಷೇತ್ರವಾರು ವಿವರಗಳನ್ನು ನೋಡುವುದಾದರೆ, ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,31,778 ಮತದಾರರಿದ್ದು, 2,13,646 ಫಾರ್ಮ್‌ಗಳನ್ನು ಗಣಕೀಕರಣಗೊಳಿಸಿದ್ದು, 18,132 ವಿಶೇಷ ಪ್ರಕರಣಗಳು ಕಂಡುಬಂದಿವೆ. ಕಾರವಾರ ಕ್ಷೇತ್ರದಲ್ಲಿ 2,23,390 ಮತದಾರರ ಪೈಕಿ 1,98,966 ಫಾರ್ಮ್‌ಗಳು ಗಣಕೀಕರಣಗೊಂಡು 24,424 ಪ್ರಕರಣಗಳನ್ನು ಗುರುತಿಸಲಾಗಿದೆ. ಶಿರಸಿ ಕ್ಷೇತ್ರದಲ್ಲಿ 2,05,743 ಮತದಾರರಲ್ಲಿ 1,91,695 ಫಾರ್ಮ್‌ಗಳು ಗಣಕೀಕರಣಗೊಂಡು 14,048 ಪ್ರಕರಣಗಳು ದಾಖಲಾಗಿವೆ. ಅದೇ ರೀತಿ ಕುಮಟಾ ಕ್ಷೇತ್ರದಲ್ಲಿ 1,92,055 ಮತದಾರರ ಪೈಕಿ 1,77,340 ಫಾರ್ಮ್‌ಗಳು ಗಣಕೀಕರಣಗೊಂಡು 14,715 ಪ್ರಕರಣಗಳು, ಯಲ್ಲಾಪುರ ಕ್ಷೇತ್ರದಲ್ಲಿ 1,89,528 ಮತದಾರರಲ್ಲಿ 1,73,413 ಫಾರ್ಮ್‌ಗಳು ಗಣಕೀಕರಣಗೊಂಡು 16,115 ಪ್ರಕರಣಗಳು ಹಾಗೂ ಹಳಿಯಾಳ ಕ್ಷೇತ್ರದಲ್ಲಿ 1,87,543 ಮತದಾರರ ಪೈಕಿ 1,67,592 ಫಾರ್ಮ್‌ಗಳು ಗಣಕೀಕರಣಗೊಂಡು 19,951 ವಿವಿಧ ಪ್ರಕರಣಗಳನ್ನು ಗುರುತಿಸಲಾಗಿದೆ.

ಈ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯು ಆಗಸ್ಟ್ 8 ರವರೆಗೆ ನಡೆಯಲಿದ್ದು, ಇದುವರೆಗೆ ವಿವಿಧ ಕಾರಣಗಳಿಂದ ಎನುಮರೇಷನ್ ಫಾರ್ಮ್ ಸಲ್ಲಿಸದಿರುವ ಮತದಾರರು ತಕ್ಷಣವೇ ತಮ್ಮ ವ್ಯಾಪ್ತಿಯ ಬಿ.ಎಲ್.ಓ ಅವರಿಗೆ ಅಗತ್ಯ ದಾಖಲೆಗಳೊಂದಿಗೆ ನಮೂನೆ ಸಲ್ಲಿಸಬೇಕು. ನಿಗದಿತ ದಿನಾಂಕದೊಳಗೆ ಫಾರ್ಮ್ ಸಲ್ಲಿಸಿದಲ್ಲಿ ಮಾತ್ರ ಮುಂಬರುವ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಪ್ರಕಟಗೊಳ್ಳಲಿದೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250