ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Uttara-Kannada

ಕಸ್ತೂರಿರಂಗನ್ ಕರಡು ಅಧಿಸೂಚನೆ ಹಿಂಪಡೆಯಲು ಒತ್ತಾಯ:ಚಂದ್ರಕಾಂತ ಕೊಚರೇಕರ

Pakka News Web • 17 ಆಗಸ್ಟ್ 2026,

ಹೊನ್ನಾವರ: ಕಸ್ತೂರಿರಂಗನ್ ಆಯೋಗದ ಶಿಫಾರಸುಗಳ ಆಧಾರದ ಮೇಲೆ ಪಶ್ಚಿಮ ಘಟ್ಟಗಳ ಜನವಸತಿ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ವಲಯ (ಇಎಸ್‌ಎ) ಎಂದು ಘೋಷಿಸುವ ಕೇಂದ್ರ ಸರ್ಕಾರದ ಕ್ರಮವನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಉತ್ತರ ಕನ್ನಡ ಜಿಲ್ಲಾ ಅರಣ್ಯ ಭೂಮಿ ಸಾಗುವಳಿದಾರರ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ಆಗ್ರಹಿಸಿದ್ದಾರೆ.

ಕಸ್ತೂರಿರಂಗನ್ ವರದಿಯನ್ನು ಆಧರಿಸಿ ಉತ್ತರ ಕನ್ನಡ ಜಿಲ್ಲೆಯ 557 ಹಳ್ಳಿಗಳನ್ನು ಪರಿಸರ ಸೂಕ್ಷ್ಮ ವಲಯಕ್ಕೆ ಸೇರಿಸಿರುವ ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವಾಲಯದ 7ನೇ ಕರಡು ಅಧಿಸೂಚನೆಗೆ ವಿರೋಧ ವ್ಯಕ್ತಪಡಿಸಿರುವ ಅವರು, ತಮ್ಮ ಹಾಗೂ ಜಿಲ್ಲಾ ಅರಣ್ಯ ಭೂಮಿ ಸಾಗುವಳಿದಾರರ ಹೋರಾಟ ಸಮಿತಿಯ ಪರವಾಗಿ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯ ಕಾರ್ಯದರ್ಶಿಗೆ ಇ-ಮೇಲ್ ಮೂಲಕ ಆಕ್ಷೇಪಣೆ ಸಲ್ಲಿಸಿದ್ದಾರೆ. ಜೊತೆಗೆ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಭೂಪೇಂದ್ರ ಯಾದವ್ ಅವರಿಗೆ ಪತ್ರ ಬರೆದು ಕರಡು ಅಧಿಸೂಚನೆಯನ್ನು ಮಧ್ಯಪ್ರವೇಶಿಸಿ ತಡೆಹಿಡಿಯುವಂತೆ ಮನವಿ ಮಾಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ತಲೆತಲಾಂತರಗಳಿಂದ ಸ್ಥಳೀಯರು ಹಾಗೂ ಅರಣ್ಯವಾಸಿಗಳು ಅರಣ್ಯವನ್ನು ಸಂರಕ್ಷಿಸುತ್ತಲೇ ಬದುಕು ಕಟ್ಟಿಕೊಂಡಿದ್ದಾರೆ. ಕೃಷಿ ಮತ್ತು ತೋಟಗಾರಿಕೆಯನ್ನು ಆಧರಿಸಿ ಲಕ್ಷಾಂತರ ಜನರು ಜೀವನ ಸಾಗಿಸುತ್ತಿರುವ ನಿತ್ಯಹರಿದ್ವರ್ಣದ ಹಸಿರು ಪ್ರದೇಶಗಳನ್ನು ಗೂಗಲ್ ಚಿತ್ರಗಳ ಆಧಾರದ ಮೇಲೆ ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸುವುದು ಜನರ ಬದುಕಿನ ಹಕ್ಕುಗಳಿಗೆ ಧಕ್ಕೆ ತರುವ ಕ್ರಮವಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಕಸ್ತೂರಿರಂಗನ್ ವರದಿಯಲ್ಲಿನ ಶಿಫಾರಸುಗಳು ಕೃಷಿಕರ ಹಕ್ಕುಗಳನ್ನು ನಿರ್ಬಂಧಿಸುವಂತಿದ್ದು, ಅರಣ್ಯ ಭೂಮಿಯಲ್ಲಿ ವಾಸಿಸುವ ಜನರ ಭವಿಷ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಕೊಚರೇಕರ ಅಭಿಪ್ರಾಯಪಟ್ಟಿದ್ದಾರೆ. ಜಿಲ್ಲೆಯಲ್ಲಿಯೇ ಅರಣ್ಯ ಹಕ್ಕು ಕಾಯ್ದೆ ಮತ್ತು ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಒಂದು ಲಕ್ಷಕ್ಕೂ ಅಧಿಕ ಜನರು ಹಕ್ಕುಪತ್ರಗಳ ನಿರೀಕ್ಷೆಯಲ್ಲಿದ್ದು, ಒಟ್ಟಾರೆ ಸುಮಾರು ಮೂರು ಲಕ್ಷ ಜನರು ಅರಣ್ಯ ಭೂಮಿಯಲ್ಲಿ ವಾಸಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ 7ನೇ ಕರಡು ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ತಿರಸ್ಕರಿಸಿ ಜನರ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಒಟ್ಟು 557 ಹಳ್ಳಿಗಳನ್ನು ಪರಿಸರ ಸೂಕ್ಷ್ಮ ವಲಯಕ್ಕೆ ಸೇರಿಸಲಾಗಿದ್ದು, ತಾಲೂಕುವಾರು ಹಳ್ಳಿಗಳ ಸಂಖ್ಯೆ ಹೀಗಿದೆ: ಹೊನ್ನಾವರ 41, ಭಟ್ಕಳ 24, ಕುಮಟಾ 40, ಅಂಕೋಲಾ 37, ಕಾರವಾರ 34, ಜೋಯಿಡಾ 86, ಯಲ್ಲಾಪುರ 83, ಸಿದ್ದಾಪುರ 99 ಹಾಗೂ ಸಿರ್ಸಿ 113 ಹಳ್ಳಿಗಳು ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಒಳಪಡಲಿವೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250