ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Uttara-Kannada

ಕರಡು ಮತದಾರರ ಪಟ್ಟಿ ಪ್ರಕಟ: ಉತ್ತರ ಕನ್ನಡದಲ್ಲಿ 11.23 ಲಕ್ಷ ಮತದಾರರು

Pakka News Web • 24 ಆಗಸ್ಟ್ 2026,

ಕಾರವಾರ: ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ–2026 (ಎಸ್‌ಐಆರ್‌)ಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯ ಕರಡು ಮತದಾರರ ಪಟ್ಟಿಯನ್ನು ಸೋಮವಾರ ಪ್ರಕಟಿಸಲಾಗಿದೆ. ಕರಡು ಪಟ್ಟಿಯ ಪ್ರಕಾರ ಜಿಲ್ಲೆಯಲ್ಲಿ 5,62,004 ಪುರುಷರು, 5,61,014 ಮಹಿಳೆಯರು ಹಾಗೂ ನಾಲ್ವರು ತೃತೀಯ ಲಿಂಗದ ಮತದಾರರು ಸೇರಿದಂತೆ ಒಟ್ಟು 11,23,022 ಮತದಾರರಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.

ಕ್ಷೇತ್ರವಾರು ಅಂಕಿ-ಅಂಶಗಳ ಪ್ರಕಾರ ಹಳಿಯಾಳದಲ್ಲಿ 1,67,767, ಕಾರವಾರದಲ್ಲಿ 1,98,962, ಕುಮಟಾದಲ್ಲಿ 1,77,434, ಭಟ್ಕಳದಲ್ಲಿ 2,13,682, ಶಿರಸಿಯಲ್ಲಿ 1,91,751 ಹಾಗೂ ಯಲ್ಲಾಪುರದಲ್ಲಿ 1,73,426 ಮತದಾರರು ಕರಡು ಪಟ್ಟಿಯಲ್ಲಿದ್ದಾರೆ.

ಮತಗಟ್ಟೆಗಳ ಪುನರ್‌ವಿಂಗಡಣೆ ಬಳಿಕ ಜಿಲ್ಲೆಯಲ್ಲಿ ಒಟ್ಟು 1,523 ಮತಗಟ್ಟೆಗಳು ಇರಲಿದ್ದು, ಹಿಂದಿನ ಸಂಖ್ಯೆಗೆ ಹೋಲಿಸಿದರೆ 78 ಮತಗಟ್ಟೆಗಳು ಹೆಚ್ಚಾಗಿವೆ. ಹಳಿಯಾಳದಲ್ಲಿ 234, ಕಾರವಾರದಲ್ಲಿ 265, ಕುಮಟಾದಲ್ಲಿ 227, ಭಟ್ಕಳದಲ್ಲಿ 273, ಶಿರಸಿಯಲ್ಲಿ 278 ಹಾಗೂ ಯಲ್ಲಾಪುರದಲ್ಲಿ 246 ಮತಗಟ್ಟೆಗಳು ಇರಲಿವೆ.

ಕರಡು ಮತದಾರರ ಪಟ್ಟಿ ಪ್ರಕಟವಾದ ಹಿನ್ನೆಲೆಯಲ್ಲಿ ಆ.24ರಿಂದ ಸೆ.23ರವರೆಗೆ ಮತದಾರರಿಗೆ ತಮ್ಮ ಹೆಸರು ಹಾಗೂ ವಿವರಗಳನ್ನು ಪರಿಶೀಲಿಸಿ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸ್ವೀಕರಿಸಲಾದ ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ ಪ್ರಕ್ರಿಯೆ ಆ.24ರಿಂದ ಅ.22ರವರೆಗೆ ನಡೆಯಲಿದ್ದು, ಅಂತಿಮ ಮತದಾರರ ಪಟ್ಟಿಯನ್ನು ಅ.27ರಂದು ಪ್ರಕಟಿಸಲಾಗುತ್ತದೆ.

ಮ್ಯಾಪಿಂಗ್ ಆಗದಿರುವ ಮತದಾರರು, ಮ್ಯಾಪಿಂಗ್‌ನಲ್ಲಿ ತಾರ್ಕಿಕ ವ್ಯತ್ಯಾಸ ಹೊಂದಿರುವವರು ಹಾಗೂ ಅಗತ್ಯವಿರುವ ಇತರ ಪ್ರಕರಣಗಳಿಗೆ ಸಂಬಂಧಿಸಿದಂತೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುತ್ತದೆ. ಸಂಬಂಧಪಟ್ಟ ಮತದಾರರಿಗೆ ಬಿಎಲ್‌ಒಗಳ ಮೂಲಕ ನೋಟಿಸ್ ತಲುಪಿಸಲಾಗುವುದು. ನೋಟಿಸ್ ಪಡೆದವರು ವಿಚಾರಣೆಯ ದಿನಾಂಕದಂದು ಅದರಲ್ಲಿ ನಮೂದಿಸಿರುವ ಸ್ಥಳ ಮತ್ತು ಸಮಯಕ್ಕೆ ಖುದ್ದಾಗಿ ಹಾಜರಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ವಿಚಾರಣೆಗೆ ಹಾಜರಾಗಲು ಸಾಧ್ಯವಾಗದವರಿಗೆ ಮತ್ತೊಂದು ದಿನಾಂಕ ನೀಡಲಾಗುತ್ತದೆ. ಗರಿಷ್ಠ ಎರಡು ವಿಚಾರಣಾ ದಿನಾಂಕಗಳಿಗೆ ಮಾತ್ರ ಅವಕಾಶವಿದೆ.

ಸೆ.23ರವರೆಗೆ ನಡೆಯುವ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆ ಅವಧಿಯಲ್ಲಿ, ಅ.1, 2026ಕ್ಕೆ 18 ವರ್ಷ ಪೂರ್ಣಗೊಳಿಸುವ ಅರ್ಹ ನಾಗರಿಕರು ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ಸೇರ್ಪಡೆಗೊಳಿಸಬಹುದು. ಇದಕ್ಕಾಗಿ ನಮೂನೆ–6ರೊಂದಿಗೆ ನಿಗದಿತ ದಾಖಲೆಗಳನ್ನು ಸಲ್ಲಿಸುವುದು ಹಾಗೂ ಡಿಕ್ಲರೇಷನ್ ಫಾರಂ ನೀಡುವುದು ಕಡ್ಡಾಯವಾಗಿದೆ. ಇದೇ ಅವಧಿಯಲ್ಲಿ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲು ನಮೂನೆ–7 ಸಲ್ಲಿಸುವುದಕ್ಕೂ, ಹೆಸರು ಹಾಗೂ ಇತರ ವಿವರಗಳಲ್ಲಿ ತಿದ್ದುಪಡಿ ಮಾಡುವುದಕ್ಕೂ ಅವಕಾಶವಿದೆ. ಮತದಾರರು ತಮ್ಮ ಹೆಸರನ್ನು ಒಂದು ಮತಗಟ್ಟೆಯಿಂದ ಮತ್ತೊಂದು ಮತಗಟ್ಟೆಗೆ ಅಥವಾ ಒಂದು ವಿಧಾನಸಭಾ ಕ್ಷೇತ್ರದಿಂದ ಮತ್ತೊಂದು ಕ್ಷೇತ್ರಕ್ಕೆ ವರ್ಗಾಯಿಸಿಕೊಳ್ಳಲು ಕೂಡ ಅವಕಾಶ ಕಲ್ಪಿಸಲಾಗಿದೆ.

ಮತದಾರರ ಪಟ್ಟಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಭಾರತ ಚುನಾವಣಾ ಆಯೋಗದ ವೆಬ್‌ಸೈಟ್ ಹಾಗೂ ಉತ್ತರ ಕನ್ನಡ ಜಿಲ್ಲಾಡಳಿತದ ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು. ಸಾರ್ವಜನಿಕರು ಮಾಹಿತಿ ಅಥವಾ ಸಲಹೆಗಳಿಗಾಗಿ ಜಿಲ್ಲಾ ಮತದಾರರ ಸಹಾಯವಾಣಿ 1950ಕ್ಕೆ ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250