ದಾಂಡೇಲಿ: ರಸ್ತೆಯಲ್ಲಿ ಬಿಡಾಡಿಯಾಗಿ ಓಡಾಡುತ್ತಿದ್ದ ಎರಡು ಹೋರಿಗಳ ಕಾಳಗ ಏಕಾಏಕಿ ಮನೆಯತ್ತ ತಿರುಗಿದ ಪರಿಣಾಮ, ಮನೆಗೆ ಹಾನಿಯಾಗಿದ್ದು ದ್ವಿಚಕ್ರ ವಾಹನ ಜಖಂಗೊಂಡ ಘಟನೆ ಮಂಗಳವಾರ ಮಧ್ಯಾಹ್ನ ನಗರದ ಮಾರುತಿ ನಗರದಲ್ಲಿ ನಡೆದಿದೆ.
ಪರಸ್ಪರ ಕಾಳಗಕ್ಕಿಳಿದ ಹೋರಿಗಳು ರಸ್ತೆಯಲ್ಲಿ ಅತ್ತಿಂದಿತ್ತ ಓಡಾಡುತ್ತಾ ಬಸವ ಹಳೆಮನಿ ಅವರ ಮನೆಯತ್ತ ನುಗ್ಗಲು ಯತ್ನಿಸಿವೆ. ಈ ವೇಳೆ ಮನೆಯ ಮುಂಭಾಗದ ಮೇಲ್ಛಾವಣಿಯ ಶೀಟ್‌ಗಳು ಕಳಚಿ ಬಿದ್ದಿದ್ದು, ಅಲ್ಲಿಯೇ ನಿಲ್ಲಿಸಿದ್ದ ದ್ವಿಚಕ್ರ ವಾಹನಕ್ಕೂ ಹಾನಿಯಾಗಿದೆ. ಘಟನೆಯಿಂದ ಮನೆಯ ಮಾಲೀಕರಿಗೆ ನಷ್ಟ ಸಂಭವಿಸಿದೆ.
ದಾಂಡೇಲಿ ನಗರದಲ್ಲಿ ಬಿಡಾಡಿ ದನ-ಕರುಗಳ ಹಾವಳಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬರುತ್ತಿವೆ. ರಸ್ತೆಯಲ್ಲಿ ದನಗಳು ಅಡ್ಡಾಡುವುದರಿಂದ ವಾಹನ ಸವಾರರಿಗೆ ಅಪಾಯ ಎದುರಾಗುತ್ತಿದ್ದು, ಈ ಹಿಂದೆ ಅಪಘಾತಗಳಿಗೂ ಕಾರಣವಾಗಿವೆ.
ಬಿಡಾಡಿ ದನಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಸಾರ್ವಜನಿಕರು ಒತ್ತಾಯಿಸುತ್ತಿರುವ ಬೆನ್ನಲ್ಲೇ ಮಾರುತಿ ನಗರದಲ್ಲಿ ನಡೆದ ಈ ಘಟನೆ ನಗರಾಡಳಿತದ ಕ್ರಮದ ಅಗತ್ಯವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ದನಗಳ ಮಾಲೀಕರನ್ನು ಪತ್ತೆಹಚ್ಚಿ ನಿಯಮಾನುಸಾರ ಕ್ರಮ ಕೈಗೊಂಡು, ರಸ್ತೆಯಲ್ಲಿ ಬಿಡಾಡಿ ದನಗಳ ಹಾವಳಿಗೆ ಕಡಿವಾಣ ಹಾಕಬೇಕೆಂಬ ಆಗ್ರಹ ಕೇಳಿಬಂದಿದೆ.
