ಕಾರವಾರ:ಹುತಾತ್ಮ ವೀರಯೋಧ ತಾಲ್ಲೂಕಿನ ಕಡವಾಡ ಗ್ರಾಮದ ವಿನೋದ ಮಹಾದೇವ ನಾಯ್ಕ ಅವರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ಎಸ್ ನಾಯ್ಕ್ ಭಾಗವಹಿಸಿ, ಹುತಾತ್ಮ ವಿನೋದ ನಾಯ್ಕ ಸ್ಮಾರಕದ ಆವರಣ ಗೋಡೆ, ಉದ್ಯಾನವನ ಉದ್ಘಾಟನೆ ನೆರವೇರಿಸಿ, ನಮನ ಸಲ್ಲಿಸಿದರು.
ನಂತರ ಮಾತನಾಡಿದ ರೂಪಾಲಿ ಎಸ್.ನಾಯ್ಕ, ದೇಶದ ಸಲುವಾಗಿ ಹುತಾತ್ಮರಾದ ಇಂತಹ ಪುತ್ರನನ್ನು ಪಡೆದ ತಂದೆ ತಾಯಿ ನಿಜವಾಗಿ ಧನ್ಯರು. ವಿನೋದ ನಾಯ್ಕ ಇಡಿ ದೇಶದ ಹೆಮ್ಮೆ. ಇವರ ಪುಣ್ಯತಿಥಿಯನ್ನು ಇಡಿ ಗ್ರಾಮದ ಜನತೆ ಸೇರಿ ಮಾಡುತ್ತಿದ್ದಾರೆ ಎಂದರೆ ಅದು ದೇಶಕ್ಕಾಗಿ ಅವರು ಬಲಿದಾನ ಮಾಡಿದ ಮಹತ್ವವನ್ನು ಸಾರುತ್ತಿದೆ ಎಂದರು.
ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ನಮ್ಮ ವೀರಯೋಧರು ಅಜರಾಮರರಾಗಿ ಇರಲಿದ್ದಾರೆ. ವೀರಯೋಧರ ದೇಶಸೇವೆಯಿಂದಾಗಿ ನಮ್ಮ ದೇಶ ಸುರಕ್ಷಿತವಾಗಿದೆ ಎಂದು ಹೇಳಿದ ರೂಪಾಲಿ ಎಸ್.ನಾಯ್ಕ, ವಿನೋದ ಮಹಾದೇವ ನಾಯ್ಕ ಕುಟುಂಬದವರ ಯೋಗಕ್ಷೇಮ ವಿಚಾರಿಸಿದರು. ತರುವಾಯ ಮಾಜಿ ಸೈನಿಕರನ್ನು ಸನ್ಮಾನಿಸಿ, ಗೌರವಿಸಿದರು.
ಸ್ಮಾರಕದ ಬಳಿ ತೆಂಗಿನ ಸಸಿಯನ್ನು ನೆಟ್ಟರು. ಈ ಸಂದರ್ಭದಲ್ಲಿ ಗ್ರಾಮೀಣ ಮಂಡಲದ ಅಧ್ಯಕ್ಷರಾದ ಸುಭಾಷ್ ಗುನಗಿ, ಕಡವಾಡ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಆನಂದು ನಾಯ್ಕ, ಮಾಜಿ ಸದಸ್ಯರಾದ ಕಿಶೋರ್ ಕಡವಾಡಕರ, ವಿನೋದ ನಾಯ್ಕ ಅವರ ತಂದೆ ಮಹಾದೇವ ನಾಯ್ಕ, ಮಾಜಿ ಸೈನಿಕರು ಮತ್ತು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.
