ಅಕ್ಟೋಬರ್ 26, 2026
ಸೋಮವಾರ

ನಮ್ಮನ್ನು ಅನುಸರಿಸಿ

Uttara-Kannada

ಮೀನುಗಾರರ ಸಂಕಷ್ಟ ನಿಧಿ ಅನ್ಯರ ಪಾಲು!

Pakka News Web • 28 ಆಗಸ್ಟ್ 2026,

ಮೀನುಗಾರರ ಬೆವರಿನ ಗಳಿಕೆಯಿಂದ ಸಂಗ್ರಹವಾಗುವ ‘ಮೀನುಗಾರರ ಸಂಕಷ್ಟ ಪರಿಹಾರ ನಿಧಿ’ಯು ಇಂದು ರಾಜಕೀಯ ಪ್ರಭಾವದಿಂದಾಗಿ ದಾರಿ ತಪ್ಪುತ್ತಿದ್ದು, ನೈಜ ಮೀನುಗಾರರ ಸಂಕಷ್ಟಗಳಿಗೆ ಬಳಕೆಯಾಗುವ ಬದಲು ಇತರರ ಪಾಲಾಗುತ್ತಿದೆ ಎಂದು ಕೆಪಿಸಿಸಿ ಮೀನುಗಾರ ವಿಭಾಗದ ಅಧ್ಯಕ್ಷ ಗಣಪತಿ ಮಾಂಗ್ರೆ ನೇರ ಆರೋಪ ಮಾಡಿದ್ದಾರೆ.

​ಕಾರವಾರದ ಪತ್ರಿಕಾಭವನದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಾಂತ್ರೀಕೃತ ಬೋಟುಗಳಿಗೆ ಪೂರೈಸುವ ಡೀಸೆಲ್‌ ಖರೀದಿಯ ಮೇಲೆ ಶೇ 1.5ರಷ್ಟು ಹಣವನ್ನು ಕಡಿತಗೊಳಿಸಿ ಈ ನಿಧಿ ಕಟ್ಟಲಾಗಿದೆ. ಕಡಲಿನಲ್ಲಿ ಎದುರಾಗುವ ಸಂಕಷ್ಟ, ನೈಸರ್ಗಿಕ ವಿಕೋಪ, ಬೋಟ್-ಬಲೆಗಳ ನಷ್ಟ ಹಾಗೂ ಜೀವ ಕಳೆದುಕೊಂಡ ಮೀನುಗಾರ ಕುಟುಂಬಗಳ ನೆರವಿಗೆ ಬರಬೇಕಾದ ಈ ಹಣವನ್ನು, ಬೇರೆ ಸಮುದಾಯದವರ ಸಾವು-ನೋವುಗಳಿಗೂ ಮೀನುಗಾರರ ಹೆಸರಿನಲ್ಲಿ ಅಕ್ರಮವಾಗಿ ವರ್ಗಾಯಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

​ವಿಜಯನಗರ ಭಾಗದಲ್ಲಿ ಹಳ್ಳಕ್ಕೆ ಬಿದ್ದು ಮೃತಪಟ್ಟವರನ್ನು ಮೀನುಗಾರರೆಂದು ತಿರುಚಿ ಪರಿಹಾರ ಬಿಡುಗಡೆ ಮಾಡಲು ಮೀನುಗಾರಿಕಾ ಸಚಿವ ಬಸವಂತಪ್ಪ ಯತ್ನಿಸುತ್ತಿರುವುದು ಅನ್ಯಾಯದ ಪರಮಾವಧಿ ಎಂದು ಕಿಡಿಕಾರಿದರು. ಕೇವಲ ಮೀನುಗಾರರ ಹಿತಕ್ಕೆ ಮಾತ್ರ ಬಳಕೆಯಾಗಬೇಕಾದ ಈ ನಿಧಿಯ ದುರುಪಯೋಗ ತಕ್ಷಣವೇ ನಿಲ್ಲಬೇಕು, ಇಲ್ಲದಿದ್ದರೆ ಜಿಲ್ಲೆಯಾದ್ಯಂತ ಪ್ರಬಲ ಜನಾಂದೋಲನ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

​ಈ ಅಕ್ರಮಕ್ಕೆ ಕಡಿವಾಣ ಹಾಕುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮೀನುಗಾರಿಕಾ ಸಚಿವರಿಗೆ ಜಿಲ್ಲಾಡಳಿತದ ಮೂಲಕ ಮನವಿ ಸಲ್ಲಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿ ಪ್ರಮುಖ ಮುಖಂಡರಾದ ಮೋಹನ ಅವರ್ಸೆಕರ್, ರಾಜೇಶ ಮಾಜಾಳಿಕರ್, ಮುರಳಿಧರ ತಾಂಡೇಲ, ನಾಗರಾಜ ಹರಿಕಂತ್ರ, ವಿಕ್ರಮ್ ತಾಂಡೇಲ, ಅಶೋಕ ಹರಿಕಂತ್ರ, ಚಂದ್ರಕಾಂತ ಹರಿಕಂತ್ರ, ರೋಹನ್ ಗಂಗಾವಳಿಕರ್ ಉಪಸ್ಥಿತರಿದ್ದು ಆಕ್ರೋಶಕ್ಕೆ ಧ್ವನಿಗೂಡಿಸಿದರು


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250