ಕುಮಟಾ: ಹೊಸ ಬಸ್ ನಿಲ್ದಾಣದ ಸಮೀಪವಿರುವ ಶ್ರೀ ಯಶೋಧರ ನಾಯ್ಕ ಕೋ-ಆಪರೇಟಿವ್ ಸೊಸೈಟಿಯ ಬೀಗ ಮುರಿದು ಒಳನುಗ್ಗಿ ಲಕ್ಷಾಂತರ ರೂಪಾಯಿ ಕಳ್ಳತನ ಮಾಡಿದ್ದ ಪ್ರಕರಣದಲ್ಲಿ ಆರೋಪಿಯ ವಿರುದ್ಧ ಕುಮಟಾದ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಆರೋಪಿಗೆ ವಿವಿಧ ಕಲಂಗಳಡಿ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
ದಾಂಡೇಲಿಯ ಸುಭಾಷನಗರ ನಿವಾಸಿ ಮುಜಫರ್ ಮಹಮ್ಮದ್ ಸಾಬ್ ಶಿಕ್ಷೆಗೆ ಗುರಿಯಾದ ಆರೋಪಿ. 2020ರ ಡಿಸೆಂಬರ್ 17ರಂದು ಮುಂಜಾನೆ ಸುಮಾರು 3.15ರ ವೇಳೆಗೆ ಆರೋಪಿ ಸೊಸೈಟಿಯ ಬೀಗ ಮುರಿದು ಒಳಪ್ರವೇಶಿಸಿದ್ದನು ಎನ್ನಲಾಗಿದೆ.
ಬಳಿಕ ಸಿಸಿ ಕ್ಯಾಮೆರಾವನ್ನು ಸ್ಥಗಿತಗೊಳಿಸಿ, ಅಲ್ಲಿದ್ದ ಆಲ್ಮೇರಾ ಹಾಗೂ ಲಾಕರ್ಗಳನ್ನು ಒಡೆದು ಒಟ್ಟು ₹1,56,994 ಹಣವನ್ನು ಕಳ್ಳತನ ಮಾಡಿದ್ದ.
ಕಳ್ಳತನದ ಸುಳಿವು ಸಿಗದಂತೆ ಮತ್ತು ಅಪರಾಧದ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಸಿಸಿ ಕ್ಯಾಮೆರಾದ ಡಿವಿಆರ್ ಅನ್ನು ಕಿತ್ತುಕೊಂಡು ಹೋಗಿ ಅಘನಾಶಿನಿ ಹೊಳೆಗೆ ಎಸೆದಿದ್ದ ಎಂಬ ಆರೋಪವೂ ಪ್ರಕರಣದಲ್ಲಿ ದಾಖಲಾಗಿತ್ತು.
ಪ್ರಕರಣದ ಸಾಕ್ಷ್ಯಾಧಾರಗಳು ಹಾಗೂ ಸಾಕ್ಷಿಗಳ ವಿಚಾರಣೆ ನಡೆಸಿದ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶರಾದ ವರ್ಷ ಶ್ರೀ ಅವರು ಆರೋಪಿಯ ವಿರುದ್ಧದ ಆರೋಪಗಳು ಸಾಬೀತಾಗಿವೆ ಎಂದು ಪರಿಗಣಿಸಿ ಶಿಕ್ಷೆ ಪ್ರಕಟಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ ಕಲಂ 457ರಡಿ ಆರೋಪಿಗೆ ಎರಡು ವರ್ಷಗಳ ಸಾಧಾರಣ ಸಜೆ ಹಾಗೂ ₹3,000 ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿಯಾಗಿ 15 ದಿನಗಳ ಸಜೆ ಅನುಭವಿಸಬೇಕಾಗುತ್ತದೆ. ಕಲಂ 380ರಡಿಯೂ ಎರಡು ವರ್ಷಗಳ ಸಾಧಾರಣ ಸಜೆ ಮತ್ತು ₹3,000 ದಂಡ ವಿಧಿಸಲಾಗಿದ್ದು, ದಂಡ ಪಾವತಿಸದಿದ್ದರೆ ಹೆಚ್ಚುವರಿ 15 ದಿನಗಳ ಸಜೆ ವಿಧಿಸಲಾಗಿದೆ.
ಅಪರಾಧದ ಸಾಕ್ಷ್ಯ ನಾಶಪಡಿಸಿದ ಆರೋಪದಡಿ ಕಲಂ 201ರಡಿ ಆರು ತಿಂಗಳ ಸಾಧಾರಣ ಸಜೆ ಹಾಗೂ ₹1,000 ದಂಡ ವಿಧಿಸಲಾಗಿದೆ. ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿಯಾಗಿ ಏಳು ದಿನಗಳ ಸಜೆ ಅನುಭವಿಸಬೇಕಾಗಿದೆ.
ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸ್ ನಿರೀಕ್ಷಕ ರವಿ ಗುಡ್ಡಿ ಅವರು ಪ್ರಕರಣದ ಭಾಗಶಃ ತನಿಖೆ ನಡೆಸಿದ್ದರು. ಬಳಿಕ ಅಂದಿನ ವೃತ್ತ ನಿರೀಕ್ಷಕರಾದ ಪರಮೇಶ್ವರ ಗುಣಗ ಹಾಗೂ ಶಿವಪ್ರಕಾಶ್ ಆರ್. ನಾಯ್ಕ್ ಅವರು ತನಿಖೆಯನ್ನು ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಗಿರೀಶ ನಾಗಪ್ಪ ಪಟಗಾರ ಅವರು ವಾದ ಮಂಡಿಸಿದ್ದರು. ಸೊಸೈಟಿಯಲ್ಲೇ ನಡೆದ ಲಕ್ಷಾಂತರ ರೂಪಾಯಿ ಕಳ್ಳತನ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆ ವಿಧಿಸಿರುವ ನ್ಯಾಯಾಲಯದ ತೀರ್ಪು ಗಮನ ಸೆಳೆದಿದೆ.
