ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Uttara-Kannada

17 ತಿಂಗಳ ಬಾಕಿ ವೇತನಕ್ಕೆ ಆಗ್ರಹ; ಗ್ರಂಥಾಲಯ ಮೇಲ್ವಿಚಾರಕರ ಹೋರಾಟ

Pakka News Web • 31 ಆಗಸ್ಟ್ 2026,

ಕಾರವಾರ: ಬಾಕಿ ಇರುವ 17 ತಿಂಗಳ ಕನಿಷ್ಠ ವೇತನದ ವ್ಯತ್ಯಾಸದ ಮೊತ್ತವನ್ನು ತಕ್ಷಣ ಪಾವತಿಸುವುದು ಸೇರಿದಂತೆ ವಿವಿಧ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಉತ್ತರ ಕನ್ನಡ ಜಿಲ್ಲೆಯ ಗ್ರಾಮ ಪಂಚಾಯತ್ ಗ್ರಂಥಾಲಯ ಹಾಗೂ ಅರಿವು ಕೇಂದ್ರಗಳ ಮೇಲ್ವಿಚಾರಕರು ಕಾರವಾರ ನಗರದ ಜಿಲ್ಲಾ ಪಂಚಾಯತ್ ಕಚೇರಿ ಎದುರು ಸಾಂಕೇತಿಕ ಧರಣಿ ನಡೆಸಿದರು.

ಗ್ರಾಮ ಪಂಚಾಯತ್ ಗ್ರಂಥಾಲಯ ಹಾಗೂ ಅರಿವು ಕೇಂದ್ರಗಳ ಮೇಲ್ವಿಚಾರಕರ ಸಂಘದ ಅಧ್ಯಕ್ಷರು ಮತ್ತು ಸದಸ್ಯರು ತಮ್ಮ ಬೇಡಿಕೆಗಳ ಕುರಿತು ಜಿಲ್ಲಾ ಪಂಚಾಯತ್ ಆಡಳಿತಕ್ಕೆ ಮನವಿ ಸಲ್ಲಿಸಿದರು. ಮನವಿಯನ್ನು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ-2 (ಆಡಳಿತ) ಪ್ರಕಾಶ ಹಾಲಮ್ಮ ಸ್ವೀಕರಿಸಿದರು.

ಮೇಲ್ವಿಚಾರಕರಿಗೆ 2025ರ ಏಪ್ರಿಲ್‌ನಿಂದ ಇಲ್ಲಿಯವರೆಗೆ ಸುಮಾರು 17 ತಿಂಗಳ ಕನಿಷ್ಠ ವೇತನದ ವ್ಯತ್ಯಾಸದ ಮೊತ್ತ ಬಾಕಿ ಉಳಿದಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಪರಿಷ್ಕೃತ ಕನಿಷ್ಠ ವೇತನಕ್ಕೆ ಅರ್ಹರಾಗಿದ್ದರೂ ಪೂರ್ಣ ಪ್ರಮಾಣದ ವೇತನ ದೊರೆಯುತ್ತಿಲ್ಲ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಸಮಸ್ಯೆಗೆ ಸ್ಪಂದನೆ ದೊರೆತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಇದರ ಜೊತೆಗೆ, ಮೇಲ್ವಿಚಾರಕರನ್ನು ಭವಿಷ್ಯ ನಿಧಿ ಯೋಜನೆಗೆ ಒಳಪಡಿಸುವಂತೆ ಆದೇಶವಿದ್ದರೂ ಪಿಎಫ್, ಪಿಂಚಣಿ ಯೋಜನೆ ಹಾಗೂ ಇಎಸ್‌ಐ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ದೂರಿದರು. ಕಡಿಮೆ ವೇತನದಲ್ಲಿ ಜೀವನ ನಡೆಸುತ್ತಿರುವ ಮೇಲ್ವಿಚಾರಕರು ಕುಟುಂಬ ನಿರ್ವಹಣೆ, ವಯೋವೃದ್ಧ ಪೋಷಕರ ಆರೈಕೆ ಹಾಗೂ ಮಕ್ಕಳ ವಿದ್ಯಾಭ್ಯಾಸದ ವೆಚ್ಚ ಭರಿಸಲು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಬಾಕಿ ಇರುವ 17 ತಿಂಗಳ ವೇತನ ವ್ಯತ್ಯಾಸದ ಮೊತ್ತವನ್ನು ಒಂದೇ ಕಂತಿನಲ್ಲಿ ಪಾವತಿಸಬೇಕು ಹಾಗೂ ಪ್ರತಿ ತಿಂಗಳು ಪೂರ್ಣ ಪ್ರಮಾಣದ ವೇತನ ನೀಡಬೇಕು ಎಂದು ಸಂಘ ಆಗ್ರಹಿಸಿದೆ. ಅಲ್ಲದೆ, ಪಿಎಫ್, ಪಿಂಚಣಿ ಮತ್ತು ಇಎಸ್‌ಐ ಸೌಲಭ್ಯಗಳನ್ನು ಇತರ ಜಿಲ್ಲೆಗಳ ಮಾದರಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಮೇಲ್ವಿಚಾರಕರಿಗೂ ವಿಸ್ತರಿಸಬೇಕು ಎಂದು ಒತ್ತಾಯಿಸಲಾಗಿದೆ.

2019ರಿಂದ ಬಾಕಿ ಉಳಿದಿರುವ ಗ್ರಂಥಾಲಯಗಳ ಸ್ವಚ್ಛತಾ ಮತ್ತು ಇತರ ನಿರ್ವಹಣಾ ವೆಚ್ಚವನ್ನು ಬಿಡುಗಡೆ ಮಾಡಬೇಕು. ಪ್ರತಿ ಗ್ರಂಥಾಲಯಕ್ಕೆ ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕಗಳು ಹಾಗೂ ಅಗತ್ಯ ಪೀಠೋಪಕರಣಗಳನ್ನು ಪೂರೈಸಬೇಕು. ಇಲಾಖೆಯಿಂದ ಹೊರಡುವ ಮೇಲ್ವಿಚಾರಕರಿಗೆ ಸಂಬಂಧಿಸಿದ ಸರ್ಕಾರಿ ಸುತ್ತೋಲೆಗಳ ಪ್ರತಿಯನ್ನು ಮಾಹಿತಿಗಾಗಿ ನೀಡಬೇಕು ಎಂಬ ಬೇಡಿಕೆಯನ್ನೂ ಸಂಘ ಮುಂದಿಟ್ಟಿದೆ.

ತಮ್ಮ ಬೇಡಿಕೆಗಳಿಗೆ ನಿಗದಿತ ಅವಧಿಯೊಳಗೆ ಲಿಖಿತವಾಗಿ ಸಕಾರಾತ್ಮಕ ಭರವಸೆ ನೀಡಬೇಕು. ಇಲ್ಲವಾದಲ್ಲಿ ಮುಂದಿನ ಹಂತದಲ್ಲಿ ಜಿಲ್ಲಾ ಪಂಚಾಯತ್ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಗ್ರಂಥಾಲಯ ಹಾಗೂ ಅರಿವು ಕೇಂದ್ರಗಳ ಮೇಲ್ವಿಚಾರಕರು ಎಚ್ಚರಿಕೆ ನೀಡಿದ್ದಾರೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250