ಗ್ರಾಮಸ್ಥರಲ್ಲಿ ತೀವ್ರ ನಡುಕ ಹುಟ್ಟಿಸಿದ್ದ ಸುಮಾರು 10 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವನ್ನು ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿ ಸೆರೆಹಿಡಿದು ಕಾಡಿಗೆ ರವಾನಿಸಿದ್ದಾರೆ. ತಾಲೂಕಿನ ಮಲ್ಲಾಪುರ ಸಮೀಪದ ಕುರ್ನಿಪೇಟೆಯಲ್ಲಿ ಸಂಭವಿಸಿದೆ.
ಕುರ್ನಿಪೇಟೆಯ ಎಲ್‌ಆ್ಯಂಡ್ ಟಿ ಕಂಪೌಂಡ್‌ಗೋಡೆಯ ಮೇಲೆ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಪತ್ತೆಯಾಗುತ್ತಿದ್ದಂತೆಯೇ ಸ್ಥಳೀಯರಲ್ಲಿ ಕ್ಷಣಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸಾರ್ವಜನಿಕರು ಓಡಾಡುವ ಜಾಗದಲ್ಲೇ ಹಾವು ಕಾಣಿಸಿಕೊಂಡಿದ್ದರಿಂದ ಜನ ಬೆಚ್ಚಿಬಿದ್ದು, ತಕ್ಷಣವೇ ಅರಣ್ಯ ಇಲಾಖೆಗೆ ತುರ್ತು ಮಾಹಿತಿ ರವಾನಿಸಿದರು.
ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಬಿಲಾಲ್ ಶೇಖ್ ಹಾಗೂ ರಾಯಪ್ಪ ಅವರು ಅತ್ಯಂತ ಜಾಣ್ಮೆಯಿಂದ ಕಾರ್ಯಾಚರಣೆ ನಡೆಸಿದರು. ನೂರಾರು ಜನರು ಕುತೂಹಲ ಮತ್ತು ಆತಂಕದಿಂದ ನೋಡುತ್ತಿದ್ದಂತೆಯೇ, ಕಂಪೌಂಡ್‌ಮೇಲಿದ್ದ ಹಾವನ್ನು ನಾಜೂಕಾಗಿ ಸೆರೆಹಿಡಿದು ಬಲೆಗೆ ಇಳಿಸಿದರು. ಬಳಿಕ ಆ ಕಾಳಿಂಗ ಸರ್ಪವನ್ನು ಜನವಸತಿಯಿಂದ ದೂರದ ದಟ್ಟ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಡಲಾಗಿದ್ದು, ಗ್ರಾಮಸ್ಥರು ನಿರಾಳರಾಗಿ ನಿಟ್ಟುಸಿರು ಬಿಟ್ಟಿದ್ದಾರೆ.
