ಕುಮಟಾ:ವಾರಾಂತ್ಯದ ರಜೆ ಕಳೆಯುವ ಸಲುವಾಗಿ ಸ್ನೇಹಿತರೊಂದಿಗೆ ಪುಣೆಯಿಂದ ಉತ್ತರ ಕನ್ನಡ ಜಿಲ್ಲೆಗೆ ಬಂದಿದ್ದ 26 ವರ್ಷದ ವಿದ್ಯಾರ್ಥಿ ಜೀವನ್ ಎಂಬುವವರು ಸಮುದ್ರದ ಅಲೆಗಳಿಗೆ ಸಿಲುಕಿ ದುರಂತ ಅಂತ್ಯ ಕಂಡಿದ್ದಾರೆ. ಕುಮಟಾದ ಕಡ್ಲೆ ಬೀಚ್ ಸಮೀಪದ ರೆಸಾರ್ಟ್‌ನಲ್ಲಿ ತಂಗಿದ್ದ ಐವರು ಯುವಕರ ತಂಡ ಸೋಮವಾರ ಮಧ್ಯಾಹ್ನ ಸಮುದ್ರದಲ್ಲಿ ಈಜಲು ತೆರಳಿತ್ತು. ಈ ವೇಳೆ ಜೀವನ್ ಅವರು ಪ್ರಬಲವಾದ ಅಲೆಗಳ ಸೆಳೆತಕ್ಕೆ ಸಿಲುಕಿ ನೀರಿನಲ್ಲಿ ಕೊಚ್ಚಿಹೋಗಿದ್ದರು. ಜೊತೆಯಲ್ಲಿದ್ದ ಸ್ನೇಹಿತರು ಅವರನ್ನು ರಕ್ಷಿಸಲು ತಕ್ಷಣವೇ ಪ್ರಯತ್ನ ನಡೆಸಿದರಾದರೂ ಅದು ಸಾಧ್ಯವಾಗಲಿಲ್ಲ.
ಘಟನೆಯ ಬಗ್ಗೆ ಮಾಹಿತಿ ಲಭಿಸುತ್ತಿದ್ದಂತೆಯೇ ಕರಾವಳಿ ಕಾವಲು ಪಡೆ, ಕೆಎನ್‌ಡಿ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರು ಜಂಟಿಯಾಗಿ ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಸೋಮವಾರ ಸಂಜೆಯವರೆಗೂ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ, ಮಂಗಳವಾರ ಕಾರ್ಯಾಚರಣೆಯನ್ನು ಪುನರಾರಂಭಿಸಿದಾಗ, ಧಾರೇಶ್ವರ ಸಮೀಪದ ಕಡೆಕೋಡಿ ಬೀಚ್ ಬಳಿ ಜೀವನ್ ಅವರ ಮೃತದೇಹ ತೇಲಿ ಬಂದಿರುವುದು ಪತ್ತೆಯಾಗಿದೆ.
ವಿಷಯ ತಿಳಿದ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕುಮಟಾ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಈ ದುರ್ಘಟನೆಗೆ ಸಂಬಂಧಿಸಿದಂತೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗಿದೆ. ವಾರಾಂತ್ಯದ ಮಜಾ ಸವಿಯಲು ಕರಾವಳಿ ತೀರಕ್ಕೆ ಬಂದು ಪ್ರಾಣ ಕಳೆದುಕೊಂಡ ಯುವಕನ ಸಾವು ಅವರ ಸ್ನೇಹಿತರ ಬಳಗಕ್ಕೆ ತೀವ್ರ ಆಘಾತವನ್ನುಂಟು ಮಾಡಿದೆ.
