ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Uttara-Kannada

ಸರ್ವರಿಗೂ ಸರ್ವರ್ ಸಮಸ್ಯೆ!

Pakka News Web • 1 ಸೆಪ್ಟೆಂ 2026,

ಕಾರವಾರ: ಪಡಿತರ ವಿತರಣೆಯಲ್ಲೇ ತೀವ್ರ ಸರ್ವರ್ ಸಮಸ್ಯೆ ಎದುರಾಗುತ್ತಿರುವ ನಡುವೆ ಇ-ಕೆವೈಸಿ ಕಾರ್ಯವನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವ ಒತ್ತಡದಿಂದ ನ್ಯಾಯಬೆಲೆ ಅಂಗಡಿ ಮಾಲೀಕರು, ನೌಕರರು ಹಾಗೂ ಪಡಿತರದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಕಾರವಾರ ತಾಲೂಕು ಗ್ರಾಮೀಣ ಹಾಗೂ ನಗರ ನ್ಯಾಯಬೆಲೆ ಅಂಗಡಿ ಮಾಲೀಕರ ಹಾಗೂ ನೌಕರರ ಒಕ್ಕೂಟ ಆರೋಪಿಸಿದೆ.

ಕಾರವಾರದ ಜಿಲ್ಲಾ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಒಕ್ಕೂಟದ ಅಧ್ಯಕ್ಷ ವೆಂಕಟೇಶ್ ಎಚ್. ನಾಯ್ಕ ಹಾಗೂ ಪದಾಧಿಕಾರಿಗಳು, ಸರ್ವರ್ ಸಮಸ್ಯೆಯಿಂದ ಒಂದು ರೇಷನ್ ಕಾರ್ಡ್‌ಗೆ ಪಡಿತರ ವಿತರಿಸಲು 10ರಿಂದ 20 ನಿಮಿಷಗಳವರೆಗೆ ಸಮಯ ತೆಗೆದುಕೊಳ್ಳುತ್ತಿದೆ ಎಂದು ದೂರಿದರು. ಇದರಿಂದ ಬೆಳಿಗ್ಗೆ ಬರುವ ಬಡ ಪಡಿತರದಾರರು ಗಂಟೆಗಟ್ಟಲೆ ನ್ಯಾಯಬೆಲೆ ಅಂಗಡಿಗಳ ಮುಂದೆ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ಇಂತಹ ತಾಂತ್ರಿಕ ಸಮಸ್ಯೆಗಳ ನಡುವೆಯೇ ಪ್ರತಿಯೊಬ್ಬ ಕಾರ್ಡುದಾರರ ಸದಸ್ಯರ ಇ-ಕೆವೈಸಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಒಂದು ಕಾರ್ಡ್‌ನಲ್ಲಿ ಮೂರರಿಂದ ಐದು ಸದಸ್ಯರಿರುವುದರಿಂದ ಇ-ಕೆವೈಸಿಗೆ ಹೆಚ್ಚಿನ ಸಮಯ ಬೇಕಾಗುತ್ತಿದೆ. ಸರ್ವರ್ ಪದೇಪದೇ ಸ್ಥಗಿತಗೊಳ್ಳುತ್ತಿರುವ ಕಾರಣ ಈ ಕಾರ್ಯವನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವುದು ಅಸಾಧ್ಯವಾಗಿದೆ ಎಂದು ಒಕ್ಕೂಟ ತಿಳಿಸಿದೆ.

ನ್ಯಾಯಬೆಲೆ ಅಂಗಡಿಗಳನ್ನು ಬೆಳಿಗ್ಗೆ 6ರಿಂದ ರಾತ್ರಿ 10 ಗಂಟೆಯವರೆಗೆ ಕಾರ್ಯನಿರ್ವಹಿಸುವಂತೆ ಸೂಚಿಸಿರುವುದನ್ನು ಒಕ್ಕೂಟ ವಿರೋಧಿಸಿದೆ. ಹೆಚ್ಚುವರಿ ಸಿಬ್ಬಂದಿಗೆ ವೇತನ ಹಾಗೂ ಸೂಕ್ತ ಕಮಿಷನ್ ವ್ಯವಸ್ಥೆ ಮಾಡದೆ ಇಂತಹ ಕಾರ್ಯಾವಧಿ ವಿಧಿಸುವುದು ಅವೈಜ್ಞಾನಿಕ ಎಂದು ಆರೋಪಿಸಿದೆ.

ಐದು ವರ್ಷಗಳ ಹಿಂದೆ ನಡೆಸಿದ ಇ-ಕೆವೈಸಿ ಕಾರ್ಯದ ಕಮಿಷನ್ ಹಣ ಇನ್ನೂ ಬಿಡುಗಡೆಯಾಗಿಲ್ಲ. ಜೊತೆಗೆ ಪ್ರತಿ ತಿಂಗಳ ಪಡಿತರ ವಿತರಣೆಯ ಕಮಿಷನ್ ಕೂಡ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ ಎಂದು ದೂರಲಾಗಿದೆ.

ಸರ್ವರ್ ಸಮಸ್ಯೆಯನ್ನು ತಕ್ಷಣ ಬಗೆಹರಿಸಿ, ಬಾಕಿ ಕಮಿಷನ್ ಬಿಡುಗಡೆ ಮಾಡಬೇಕು ಹಾಗೂ ಇ-ಕೆವೈಸಿ ಕಾರ್ಯಕ್ಕೆ ಅಗತ್ಯ ಸೌಲಭ್ಯ ಒದಗಿಸಬೇಕು ಎಂದು ಒಕ್ಕೂಟ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಸಮಸ್ಯೆಗಳಿಗೆ ಪರಿಹಾರ ಕಂಡರೆ ಸರ್ಕಾರದ ನಿರ್ದೇಶನದಂತೆ ಕಾರ್ಯನಿರ್ವಹಿಸಲು ಸಿದ್ಧರಿದ್ದೇವೆ ಎಂದು ಒಕ್ಕೂಟ ತಿಳಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಅಬ್ದುಲ್ ಸೈಯದ್,ಕಿನ್ನರ್, ಪೂಜಾ ನಾಯ್ಕ, ದೇವಿಕಾ ನಾಯ್ಕ, ಕೈಲಾಸ್, ವಿ. ಡಿ.‌ಶೆಟ್ಟಿ,  ರೋಹಿದಾಸ ಮಾಳ್ಸೇಕರ್, ಮಾದೇವ ಮಾರಾಠೆ ಇದ್ದರು.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250