ಶಿರಸಿ:ಕಸ್ತೂರಿರಂಗನ್ ವರದಿಯ 7ನೇ ಅಧಿಸೂಚನೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ 567 ಹಳ್ಳಿಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿರುವುದು ಸ್ಥಳೀಯರ ಜನಜೀವನಕ್ಕೆ ಮಾರಕವಾಗಲಿದೆ. ಹೀಗಾಗಿ ಈ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು ಮತ್ತು ವರದಿಯ ವ್ಯಾಪ್ತಿಯಿಂದ ಜನವಸತಿ ಪ್ರದೇಶಗಳನ್ನು ಸಂಪೂರ್ಣವಾಗಿ ಮುಕ್ತಗೊಳಿಸಬೇಕು ಎಂದು ರಾಜ್ಯ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಆಗ್ರಹಿಸಿದರು.
ಕಸ್ತೂರಿರಂಗನ್ ವರದಿ ವಿರೋಧಿಸಿ ಹಮ್ಮಿಕೊಳ್ಳಲಾದ ‘ಒಂದು ಲಕ್ಷ ಆಕ್ಷೇಪಣಾ ಪತ್ರ’ ಅಭಿಯಾನದ ಅಂಗವಾಗಿ ಶಿರಸಿಯ ನಗರಸಭೆ ಬಯಲು ರಂಗಮಂದಿರದಲ್ಲಿ ಜರುಗಿದ ಬೃಹತ್ ಸಭೆಯಲ್ಲಿ ಸಹಸ್ರಾರು ಆಕ್ಷೇಪಣಾ ಪತ್ರಗಳನ್ನು ಸಲ್ಲಿಸಿ ಮಾತನಾಡಿದ ಅವರು, ಸೂಕ್ಷ್ಮ ಪ್ರದೇಶಗಳ ಸಮಗ್ರ ಅಧ್ಯಯನಕ್ಕಾಗಿ ತಜ್ಞರ ಸಮಿತಿ ರಚಿಸಿ, ಕೇಂದ್ರ ಸರ್ಕಾರಕ್ಕೆ ತಾಂತ್ರಿಕ ಹಿನ್ನೆಲೆಯಲ್ಲಿ ಆಕ್ಷೇಪಣೆ ಸಲ್ಲಿಸಲು ಸಭೆಯಲ್ಲಿ ಒಕ್ಕೊರಲ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕೇಂದ್ರ ಪರಿಸರ ಇಲಾಖೆ ಹೊರಡಿಸಿರುವ ಈ ಅಧಿಸೂಚನೆಯು ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಇದರಿಂದ ಅರಣ್ಯವಾಸಿಗಳಲ್ಲಿ ಅಭದ್ರತೆ ಕಾಡುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರವು ವೈಜ್ಞಾನಿಕ ಹಾಗೂ ತಾಂತ್ರಿಕ ಆಧಾರಗಳೊಂದಿಗೆ, ಸ್ಥಳೀಯ ಜನಜೀವನದ ಮೇಲಾಗುವ ದುಷ್ಪರಿಣಾಮಗಳನ್ನು ದಾಖಲಿಸಿ ಕೇಂದ್ರಕ್ಕೆ ಪ್ರಬಲ ಆಕ್ಷೇಪಣೆ ಸಲ್ಲಿಸಬೇಕೆಂದು ಅವರು ಒತ್ತಾಯಿಸಿದರು.
ಜತೆಗೆ, ಜಿಲ್ಲಾಡಳಿತವು ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾದ ಗ್ರಾಮಗಳ ಪಂಚಾಯತ್ ವ್ಯಾಪ್ತಿಯ ಗ್ರಾಮಸಭೆಗಳಲ್ಲಿ ಸೂಕ್ತ ನಿರ್ಣಯ ಅಂಗೀಕರಿಸಿ, ಸ್ಥಳೀಯ ಜೀವನ ವ್ಯವಸ್ಥೆಯ ನೈಜ ವರದಿಯನ್ನು ರಾಜ್ಯ ಸರ್ಕಾರಕ್ಕೆ ರವಾನಿಸಬೇಕೆಂದು ಅವರು ಹೇಳಿದರು. ಇದೇ ವೇಳೆ, ಕಸ್ತೂರಿರಂಗನ್ ವರದಿ ಜಾರಿಯನ್ನು ವಿರೋಧಿಸಿ ಜಿಲ್ಲೆಯ ಗ್ರಾಮ ಪಂಚಾಯತಿ ಮಟ್ಟದಿಂದ ದೇಶದ ರಾಜಧಾನಿ ದೆಹಲಿಯವರೆಗೂ ಬೃಹತ್ ಹೋರಾಟ ಸಂಘಟಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾಡಳಿತದ ಮಾರ್ಗದರ್ಶನದಂತೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಅಮಿತ್ ಚೌಹಾಣ್ ಹಾಗೂ ನಗರಸಭೆ ಆಯುಕ್ತ ಪ್ರಕಾಶ್ ಅವರು ವೇದಿಕೆಯಲ್ಲಿ ಸಾರ್ವಜನಿಕರಿಂದ ಆಕ್ಷೇಪಣಾ ಪತ್ರಗಳನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಿಪಿಐ ಸಂಪತ್ ಕುಮಾರ್ ಉಪಸ್ಥಿತರಿದ್ದರು. ಮುಂಚಿತವಾಗಿ ಮಹಾಬಲೇಶ್ವರ ನಾಯ್ಕ ಬೇಡ್ಕಣಿ ಸ್ವಾಗತಿಸಿದರು. ಸಭೆಯನ್ನುದ್ದೇಶಿಸಿ ಶೋಭಾ ನಾಯ್ಕ, ಎಸ್.ಎನ್. ಹೆಗಡೆ, ರಾಘು ಗುಡ್ನಾಪುರ, ಶ್ರೀಧರ ಹೆಗಡೆ, ನಾಗಪತಿ ಗೌಡ ಹುಕ್ಕಳ್ಳಿ ಹಾಗೂ ಕಿರಣ ಮರಾಠಿ ದೇವನಳ್ಳಿ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ಸಂಚಾಲಕ ಇಬ್ರಾಹಿಂ ಗೌಡಳ್ಳಿ, ಮುಂಡಗೋಡು ಅಧ್ಯಕ್ಷ ಶಿವಾನಂದ ಜೋಗಿ, ಕೆ.ಟಿ. ನಾಯ್ಕ, ರಾಜು ನರೇಬೈಲ್, ಅಣ್ಣಪ್ಪ ನಾಯ್ಕ ಕಣ್ಣಿಗೇರಿ, ಆರ್.ಟಿ. ನಾಯ್ಕ ವಾಜಗೋಡ, ಸ್ವಾತಿ ಜೈನ್, ಮಲ್ಲೇಶಿ, ಸತೀಶ್ ನಾಯ್ಕ ತ್ಯಾಗಲಿ, ಲಕ್ಷ್ಮಣ ನಾಯ್ಕ, ಕಲ್ಪನಾ ನರೇಬೈಲ್, ಯಶೋಧಾ ನೌಟೂರು ಸೇರಿದಂತೆ ನೂರಾರು ಪ್ರಮುಖರು ಉಪಸ್ಥಿತರಿದ್ದರು.
