ಅಂಕೋಲಾ: ರೇಬಿಸ್ ಸೋಂಕಿತ ನಾಯಿ ಕಡಿತದಿಂದ ಇಬ್ಬರು ಮಹಿಳೆಯರು ಮೃತಪಟ್ಟರೂ, ಅವರ ಕುಟುಂಬಗಳಿಗೆ ಸರ್ಕಾರದಿಂದ ಸಿಗಬೇಕಾದ ಪರಿಹಾರ ಇನ್ನೂ ದೊರಕಿಲ್ಲ.
ಎಂಟು ತಿಂಗಳಿಂದ ಪರಿಹಾರಕ್ಕಾಗಿ ಕಾಯುತ್ತಿರುವ ಕುಟುಂಬಗಳ ಪರವಾಗಿ ಜನಶಕ್ತಿ ವೇದಿಕೆ ದಾಖಲೆಗಳ ಸಮೇತ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದು, ಪ್ರಕರಣ ಪರಿಶೀಲಿಸಿ ಶೀಘ್ರ ಪರಿಹಾರ ಒದಗಿಸುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ.
ಅಂಕೋಲಾದ ಸತ್ಯಾಗ್ರಹ ಸ್ಮಾರಕ ಭವನದಲ್ಲಿ ನಡೆದ ಪ್ರಜಾಸೇವಾ ಕಾರ್ಯಕ್ರಮದಲ್ಲಿ ಈ ಮನವಿ ಸಲ್ಲಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು, ಕಾರವಾರ–ಅಂಕೋಲಾ ಶಾಸಕ ಸತೀಶ್ ಸೈಲ್ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಉಪಸ್ಥಿತರಿದ್ದರು. ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರು ಮೃತರ ಕುಟುಂಬಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳಿಗೆ ಹಸ್ತಾಂತರಿಸಿದರು.
ಬೇಲೆಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೋಭಾ ಪುರುಸಪ್ಪ ನಾಯ್ಕ್ ಹಾಗೂ ಹಟ್ಟಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾವಿತ್ರಿ ಪೇಟು ಗೌಡ ಅವರು ರೇಬಿಸ್ ಸೋಂಕಿತ ನಾಯಿ ಕಡಿತಕ್ಕೆ ಒಳಗಾಗಿ ಮೃತಪಟ್ಟಿದ್ದರು. ಇಬ್ಬರ ಕುಟುಂಬಗಳೂ ಆರ್ಥಿಕವಾಗಿ ದುರ್ಬಲವಾಗಿದ್ದು, ಕುಟುಂಬದ ಸದಸ್ಯರ ಸಾವಿನಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿವೆ ಎಂದು ಜನಶಕ್ತಿ ವೇದಿಕೆ ತಿಳಿಸಿದೆ.
ಮೃತರ ಕುಟುಂಬಗಳಿಗೆ ಸರ್ಕಾರದ ನಿಯಮಾನುಸಾರ ತಲಾ 5 ಲಕ್ಷ ರೂ. ಪರಿಹಾರ ನೀಡಬೇಕೆಂದು ಈ ಹಿಂದೆಯೂ ಹಲವು ಬಾರಿ ಮನವಿ ಮಾಡಲಾಗಿತ್ತು. ಆದರೆ ಘಟನೆ ನಡೆದು ಸುಮಾರು ಎಂಟು ತಿಂಗಳು ಕಳೆದರೂ ಪರಿಹಾರ ಮಂಜೂರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರದ ಸುತ್ತೋಲೆ, ಮರಣೋತ್ತರ ಪರೀಕ್ಷೆಯ ವರದಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ, ಪರಿಹಾರ ಮಂಜೂರಾತಿಗೆ ತ್ವರಿತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು, ಎರಡೂ ಪ್ರಕರಣಗಳು ತಮ್ಮ ಗಮನದಲ್ಲಿದ್ದು, ಸಂಬಂಧಪಟ್ಟ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದು ನಿಯಮಾನುಸಾರ ಕ್ರಮ ಕೈಗೊಂಡು ಅರ್ಹ ಕುಟುಂಬಗಳಿಗೆ ಶೀಘ್ರ ಪರಿಹಾರ ದೊರಕುವಂತೆ ನೋಡಿಕೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಜನಶಕ್ತಿ ವೇದಿಕೆಯ ಸಂಘಟನಾ ಕಾರ್ಯದರ್ಶಿ ನಿತ್ಯಾನಂದ ನಾಯ್ಕ್ ಸೇರಿದಂತೆ ಮೃತರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
ರೇಬಿಸ್‌ಗೆ ಬಲಿಯಾದ ಕುಟುಂಬಗಳಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ನೀಡಿರುವ ಭರವಸೆಯಂತೆ ಪರಿಹಾರ ಶೀಘ್ರ ಮಂಜೂರಾಗಬೇಕು ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಆಗ್ರಹಿಸಿದರು.
