ಅಕ್ಟೋಬರ್ 26, 2026
ಸೋಮವಾರ

ನಮ್ಮನ್ನು ಅನುಸರಿಸಿ

Uttara-Kannada

ಗಣೇಶೋತ್ಸವ: ವಿವಿಧೆಡೆ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ

Pakka News Web • 12 ಸೆಪ್ಟೆಂ 2026,

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ನಡೆಯುವ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಹಾಗೂ ಮಹಿಳೆಯರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಕೆಲವರು ಮದ್ಯಪಾನ ಮಾಡಿ ಸಾರ್ವಜನಿಕರಿಗೆ ಮತ್ತು ಮಹಿಳೆಯರಿಗೆ ತೊಂದರೆ ನೀಡಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಸಾಧ್ಯತೆ ಇರುವುದರಿಂದ, ಸಾರ್ವಜನಿಕ ಹಿತದೃಷ್ಟಿಯಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ಹಂತ-ಹಂತವಾಗಿ ಮದ್ಯ ಮಾರಾಟ ಹಾಗೂ ಸಾಗಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅವರು ಆದೇಶ ಹೊರಡಿಸಿದ್ದಾರೆ.
ಕರಾವಳಿ ಭಾಗದ ಠಾಣಾ ವ್ಯಾಪ್ತಿಗಳ ಪೈಕಿ, ಭಟ್ಕಳ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 14 ರ ಬೆಳಗ್ಗೆ 6 ಗಂಟೆಯಿಂದ 24 ಗಂಟೆಗಳ ಕಾಲ ಹಾಗೂ ಭಟ್ಕಳ ನಗರ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 16 ರ ಬೆಳಗ್ಗೆ 6 ಗಂಟೆಯಿಂದ 24 ಗಂಟೆಗಳ ಕಾಲ ಮದ್ಯ ಮಾರಾಟ ಇರುವುದಿಲ್ಲ. ಮುರ್ಡೇಶ್ವರದಲ್ಲಿ ಸೆಪ್ಟೆಂಬರ್ 24 ರ ಬೆಳಗ್ಗೆ 6 ಗಂಟೆಯಿಂದ 24 ಗಂಟೆ ನಿಷೇಧವಿರಲಿದೆ.
ಮಂಕಿ ಠಾಣಾ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 16 ರ ಬೆಳಗ್ಗೆ 6 ರಿಂದ 48 ಗಂಟೆಗಳ ಕಾಲ ಮತ್ತು ಸೆಪ್ಟೆಂಬರ್ 20 ರ ಬೆಳಗ್ಗೆ 6 ರಿಂದ 24 ಗಂಟೆಗಳ ಕಾಲ ನಿರ್ಬಂಧ ಹೇರಲಾಗಿದೆ. ಹೊನ್ನಾವರದಲ್ಲಿ ಸೆಪ್ಟೆಂಬರ್ 18 ಮತ್ತು 22 ರಂದು ಹಾಗೂ ಕುಮಟಾದಲ್ಲಿ ಸೆಪ್ಟೆಂಬರ್ 18 ಮತ್ತು 20 ರಂದು ಬೆಳಗ್ಗೆ 6 ಗಂಟೆಯಿಂದ ತಲಾ 24 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಗೋಕರ್ಣದಲ್ಲಿ ಸೆಪ್ಟೆಂಬರ್ 17 ರ ಬೆಳಗ್ಗೆ 6 ರಿಂದ 48 ಗಂಟೆಗಳ ಕಾಲ ಈ ಆದೇಶ ಜಾರಿಯಲ್ಲಿರಲಿದೆ. ಅಂಕೋಲಾ ಠಾಣಾ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 15, 18, 20 ರಂದು ಬೆಳಗ್ಗೆ 6 ರಿಂದ ತಲಾ 24 ಗಂಟೆಗಳು ಹಾಗೂ ಸೆಪ್ಟೆಂಬರ್ 22 ರ ಬೆಳಗ್ಗೆ 6 ರಿಂದ ಸೆಪ್ಟೆಂಬರ್ 25 ರ ಬೆಳಗ್ಗೆ 6 ಗಂಟೆಯವರೆಗೆ ಸತತ ನಿಷೇಧವಿರಲಿದೆ. ಕಾರವಾರ ನಗರ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 18, 20, 22 ಮತ್ತು 24 ರಂದು ಹಾಗೂ ಮಲ್ಲಾಪುರ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 20 ಮತ್ತು 22 ರಂದು ಬೆಳಗ್ಗೆ 6 ರಿಂದ ತಲಾ 24 ಗಂಟೆಗಳ ಕಾಲ ಮದ್ಯ ಮಾರಾಟವನ್ನು ನಿರ್ಬಂಧಿಸಲಾಗಿದೆ.
ಮಲೆನಾಡು ಹಾಗೂ ಘಟ್ಟದ ಮೇಲಿನ ಭಾಗಗಳಲ್ಲಿ, ಶಿರಸಿ ತಾಲೂಕು ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 18 ರ ಬೆಳಗ್ಗೆ 6 ರಿಂದ ಸೆಪ್ಟೆಂಬರ್ 20 ರ ಬೆಳಗ್ಗೆ 6 ರವರೆಗೆ ಹಾಗೂ ಸೆಪ್ಟೆಂಬರ್ 23 ಮತ್ತು 25 ರಂದು ಬೆಳಗ್ಗೆ 6 ರಿಂದ ತಲಾ 24 ಗಂಟೆಗಳ ಕಾಲ ಮದ್ಯದಂಗಡಿಗಳು ಬಂದ್ ಆಗಿರಲಿವೆ. ಸಿದ್ದಾಪುರದಲ್ಲಿ ಸೆಪ್ಟೆಂಬರ್ 18 ರಂದು 24 ಗಂಟೆ ಹಾಗೂ ಸೆಪ್ಟೆಂಬರ್ 20 ರ ಬೆಳಗ್ಗೆ 6 ರಿಂದ ಸೆಪ್ಟೆಂಬರ್ 21 ರ ಬೆಳಗ್ಗೆ 6 ರವರೆಗೆ ನಿಷೇಧವಿರುತ್ತದೆ. ಮುಂಡಗೋಡಿನಲ್ಲಿ ಸೆಪ್ಟೆಂಬರ್ 18, 20, 22 ಮತ್ತು 26 ರಂದು ಹಾಗೂ ಯಲ್ಲಾಪುರ ಪಟ್ಟಣ, ಮಂಚಿಕೇರಿ ಮತ್ತು ಕಿರವತ್ತಿ ಭಾಗಗಳಲ್ಲಿ ಸೆಪ್ಟೆಂಬರ್ 18, 20 ಮತ್ತು 24 ರಂದು ಬೆಳಗ್ಗೆ 6 ರಿಂದ ತಲಾ 24 ಗಂಟೆಗಳ ಕಾಲ ನಿರ್ಬಂಧ ಅನ್ವಯವಾಗಲಿದೆ.
ಅಂತೆಯೇ ದಾಂಡೇಲಿ ಮತ್ತು ಹಳಿಯಾಳ ತಾಲೂಕು ವ್ಯಾಪ್ತಿಗಳಲ್ಲಿ ಸೆಪ್ಟೆಂಬರ್ 18, 20, 22 ಮತ್ತು 24 ರಂದು (ದಾಂಡೇಲಿಯಲ್ಲಿ ಹೆಚ್ಚುವರಿಯಾಗಿ ಸೆಪ್ಟೆಂಬರ್ 25 ರಂದು) ಬೆಳಗ್ಗೆ 6 ರಿಂದ ತಲಾ 24 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಜೋಯಿಡಾ ತಾಲೂಕಿನಲ್ಲಿ ಸೆಪ್ಟೆಂಬರ್ 20 ಮತ್ತು 22 ರಂದು ತಲಾ 24 ಗಂಟೆ ಹಾಗೂ ಸೆಪ್ಟೆಂಬರ್ 24 ರ ಬೆಳಗ್ಗೆ 6 ರಿಂದ 48 ಗಂಟೆಗಳ ಕಾಲ ಆದೇಶ ಜಾರಿಯಲ್ಲಿರಲಿದೆ. ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 20, 22 ಮತ್ತು 25 ರಂದು ಬೆಳಗ್ಗೆ 6 ರಿಂದ ತಲಾ 24 ಗಂಟೆಗಳ ಕಾಲ ವೈನ್ ಶಾಪ್, ಬಾರ್ ಸೇರಿದಂತೆ ಎಲ್ಲಾ ಮಾದರಿಯ ಮದ್ಯ ಮಾರಾಟ ಮತ್ತು ಸಾಗಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250