ಕಾರವಾರ: ಗಣೇಶ ಚತುರ್ಥಿಗೆ ಇನ್ನೊಂದು ದಿನ ಮಾತ್ರ ಬಾಕಿ ಇರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಗಣೇಶೋತ್ಸವದ ಸಂಭ್ರಮ ಮನೆಮಾಡಿದೆ. ಈ ನಡುವೆ ಮಣ್ಣಿನ ಗಣಪತಿ ವಿಗ್ರಹಗಳಿಗೆ ಬಣ್ಣದ ಚಿತ್ತಾರಗಳನ್ನು ಮೂಡಿಸಿ ಅಂತಿಮ ಸ್ಪರ್ಶ ನೀಡುವ ಕಾರ್ಯದಲ್ಲಿ ಕಲಾವಿದರು ತೊಡಗಿಸಿಕೊಂಡಿದ್ದಾರೆ. ಕಾರವಾರ ತಾಲ್ಲೂಕಿನ ಕಡವಾಡ ಗ್ರಾಮದ ಗಣಪತಿ ಬಾಬನಿ ಮಾಂಜ್ರೇಕರ ಮತ್ತು ಅವರ ಪುತ್ರ ರಜತ ಮಾಂಜ್ರೇಕರ ಈ ಬಾರಿ ವಿವಿಧ ವಿನ್ಯಾಸಗಳ ಆಕರ್ಷಕ ಮಣ್ಣಿನ ಗಣಪತಿ ವಿಗ್ರಹಗಳನ್ನು ತಯಾರಿಸಿ ಗಮನ ಸೆಳೆದಿದ್ದಾರೆ.

ಅನೇಕ ವರ್ಷಗಳಿಂದ ಮಣ್ಣಿನ ಗಣಪತಿ ವಿಗ್ರಹ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಗಣಪತಿ ಮಾಂಜ್ರೇಕರ ಅವರು ತಮ್ಮ ಪುತ್ರ ರಜತ ಅವರಿಗೆ ಬಾಲ್ಯದಲ್ಲಿಯೇ ಈ ಕಲೆಯನ್ನು ಪರಿಚಯಿಸಿದ್ದರು. ರಜತ ಕೇವಲ ಒಂಬತ್ತು ವರ್ಷದವರಾಗಿದ್ದಾಗಲೇ ವಿಗ್ರಹ ನಿರ್ಮಾಣದ ಸೂಕ್ಷ್ಮತೆಗಳನ್ನು ತಂದೆಯಿಂದ ಕಲಿತುಕೊಂಡಿದ್ದರು. ಇದೀಗ ತಂದೆಯೊಂದಿಗೆ ಕೈಜೋಡಿಸಿರುವ ಅವರು ವಿವಿಧ ಕಲಾಕೃತಿಗಳೊಂದಿಗೆ ಸುಂದರ ಹಾಗೂ ಪರಿಸರ ಸ್ನೇಹಿ ಗಣಪತಿ ವಿಗ್ರಹಗಳನ್ನು ರೂಪಿಸುವಲ್ಲಿ ಪರಿಣತಿ ಪಡೆದಿದ್ದಾರೆ.
ಮಾಂಜ್ರೇಕರ ಕುಟುಂಬ ತಯಾರಿಸುವ ಮಣ್ಣಿನ ಗಣಪತಿ ವಿಗ್ರಹಗಳಿಗೆ ಕಾರವಾರ ತಾಲ್ಲೂಕಿನಲ್ಲಷ್ಟೇ ಅಲ್ಲದೆ ನೆರೆಯ ಗೋವಾ ರಾಜ್ಯದಲ್ಲಿಯೂ ಹೆಚ್ಚಿನ ಬೇಡಿಕೆ ಇದೆ. ಈ ವರ್ಷ ಅವರು ಸುಮಾರು 30 ವಿಗ್ರಹಗಳನ್ನು ನಿರ್ಮಿಸಿದ್ದು, ಅವುಗಳಲ್ಲಿ ಐದು ವಿಗ್ರಹಗಳನ್ನು ಈಗಾಗಲೇ ಗೋವಾ ರಾಜ್ಯಕ್ಕೆ ಸಾಗಿಸಲಾಗಿದೆ. ವರ್ಷದಿಂದ ವರ್ಷಕ್ಕೆ ಪರಿಸರ ಸ್ನೇಹಿ ಮಣ್ಣಿನ ಗಣಪತಿಗಳತ್ತ ಜನರ ಒಲವು ಹೆಚ್ಚುತ್ತಿರುವುದರಿಂದ ಬೇಡಿಕೆಯೂ ಏರಿಕೆಯಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಆದರೆ ಮಣ್ಣಿನ ವಿಗ್ರಹ ನಿರ್ಮಾಣ ಕ್ಷೇತ್ರ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಕಚ್ಚಾ ವಸ್ತುಗಳ ಬೆಲೆ ಏರಿಕೆ, ಕಾರ್ಮಿಕ ವೆಚ್ಚ ಹಾಗೂ ವಿಗ್ರಹವನ್ನು ತಯಾರಿಸಿ ಗ್ರಾಹಕರ ಮನೆಗೆ ತಲುಪಿಸುವವರೆಗಿನ ಖರ್ಚು ಗಣನೀಯವಾಗಿ ಹೆಚ್ಚಾಗಿದೆ. ಮತ್ತೊಂದೆಡೆ ಈ ಕಲೆಯನ್ನು ಮುಂದುವರಿಸುವ ಕಲಾವಿದರ ಸಂಖ್ಯೆಯೂ ಇಳಿಮುಖವಾಗುತ್ತಿರುವುದು ಆತಂಕದ ಸಂಗತಿಯಾಗಿದೆ.
ಪಾರಂಪರಿಕ ಕಲೆಯನ್ನು ಉಳಿಸಿ ಬೆಳೆಸಲು ಸರ್ಕಾರದಿಂದ ಹೆಚ್ಚಿನ ಪ್ರೋತ್ಸಾಹ ಅಗತ್ಯವಿದೆ ಎಂದು ಕಲಾವಿದರು ಅಭಿಪ್ರಾಯಪಟ್ಟಿದ್ದಾರೆ. ಮಣ್ಣಿನ ವಿಗ್ರಹ ಕಲಾವಿದರಿಗೆ ಆರ್ಥಿಕ ನೆರವು, ವಿಶೇಷ ಪ್ರೋತ್ಸಾಹಧನ ಹಾಗೂ ಕಲಾವಿದರ ಮಾಸಾಶನದಂತಹ ಸೌಲಭ್ಯಗಳನ್ನು ಒದಗಿಸಿದರೆ ಈ ಅಪರೂಪದ ಕಲೆ ಮುಂದಿನ ಪೀಳಿಗೆಗೂ ಉಳಿಯಲು ನೆರವಾಗಲಿದೆ ಎಂದು ಅವರು ಆಶಿಸಿದ್ದಾರೆ.
