ಅಕ್ಟೋಬರ್ 26, 2026
ಸೋಮವಾರ

ನಮ್ಮನ್ನು ಅನುಸರಿಸಿ

Uttara-Kannada

ಸರ್ಕಾರದ ಯೋಜನೆಗಳು ಜನರ ಜೀವನಕ್ಕೆ ಬೆಳಕು ನೀಡುವಂತಾಗಬೇಕು: ಶಾಸಕ ಭೀಮಣ್ಣ ನಾಯ್ಕ ಕರೆ

Pakka News Web • 12 ಸೆಪ್ಟೆಂ 2026,

ಸಿದ್ದಾಪುರ: ಸರ್ಕಾರದ ಜನಪರ ಯೋಜನೆಗಳು ಕೇವಲ ಕಾಗದದ ಪಟ್ಟಿಯಲ್ಲಿ ಉಳಿಯದೆ ಬಡವರು ಮತ್ತು ಸಾಮಾನ್ಯ ಜನರ ಬದುಕಿನಲ್ಲಿ ಬದಲಾವಣೆ ತಂದು ಅವರ ಜೀವನಕ್ಕೆ ಬೆಳಕು ನೀಡಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ಸಿದ್ದಾಪುರ ತಾಲ್ಲೂಕಿನ ಹಲಿಗೇರಿ ಹೋಬಳಿಯಲ್ಲಿ ಆಯೋಜಿಸಲಾಗಿದ್ದ ತಾಲ್ಲೂಕು ಮಟ್ಟದ ‘ಪ್ರಜಾಸೇವೆ ಆಂದೋಲನ’ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಜನರು ಎದುರಿಸುತ್ತಿರುವ ರಸ್ತೆ, ಚರಂಡಿ, ಕುಡಿಯುವ ನೀರು ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದ ಮೂಲಸೌಕರ್ಯ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದು ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳಲು ಈ ಸಭೆಗಳು ಸಹಕಾರಿಯಾಗಿವೆ ಎಂದರು.

ಪಂಚ ಗ್ಯಾರಂಟಿ ಯೋಜನೆಗಳಿಂದ 1.20 ಕೋಟಿಗೂ ಅಧಿಕ ಕುಟುಂಬಗಳಿಗೆ ಆರ್ಥಿಕ ನೆರವು ಸಿಗುತ್ತಿದ್ದು, ವಿದ್ಯಾರ್ಥಿಗಳಿಗೂ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಕಲ್ಪಿಸಲಾಗಿದೆ. ಅಲ್ಲದೆ ‘ಭಾರತ್ ಜೋಡೋ’ ಯುವ ಸಂಘಟನೆಗಳ ಮೂಲಕ ಯುವಶಕ್ತಿಯನ್ನು ಸಬಲೀಕರಣಗೊಳಿಸಲು ವಾರ್ಷಿಕ ₹10 ಲಕ್ಷ ಅನುದಾನ ನೀಡಲಾಗುತ್ತಿದೆ. ರಾಜ್ಯದಲ್ಲಿ ನಿವೇಶನರಹಿತರಿಗೆ 5 ಲಕ್ಷ ನಿವೇಶನ ನೀಡುವ ಭೂಗ್ಯಾರಂಟಿ ಯೋಜನೆಯಡಿ ನಮ್ಮ ಕ್ಷೇತ್ರಕ್ಕೆ 7,000 ದಿಂದ 8,000 ನಿವೇಶನಗಳು ದೊರೆಯುವ ನಿರೀಕ್ಷೆಯಿದ್ದು, ನಿವೇಶನರಹಿತರು ಕೂಡಲೇ ಅರ್ಜಿ ಸಲ್ಲಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಮಾತನಾಡಿ, ‘ಪ್ರಜಾಸೇವೆ’ ಆಂದೋಲನವು ಆಡಳಿತವನ್ನು ಜನರ ಮನೆಬಾಗಿಲಿಗೆ ಕೊಂಡೊಯ್ಯುವ ಕಾರ್ಯಕ್ರಮವಾಗಿದ್ದು, ಸ್ವೀಕರಿಸಿದ ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ದಾಖಲಿಸಿ ಮುಂದಿನ 20 ದಿನಗಳಲ್ಲಿ ಪರಿಹಾರ ಕಲ್ಪಿಸಲಾಗುವುದು ಎಂದರು. ಮಳೆ ಕಡಿಮೆಯಾಗಿರುವ ಕಾರಣ ಬೇಸಿಗೆಯ ಕುಡಿಯುವ ನೀರಿನ ಸಮಸ್ಯೆ ತಡೆಯಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ₹1 ಕೋಟಿ ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದ ಅವರು, ಭೂಗ್ಯಾರಂಟಿ ಯೋಜನೆಯಡಿ ನಿವೇಶನ ನೀಡಲು ಹಲಿಗೇರಿ ಹೋಬಳಿಯಲ್ಲೇ 63 ಎಕರೆ ಜಾಗ ಗುರುತಿಸಲಾಗಿದೆ ಹಾಗೂ ಅತಿಕ್ರಮಣ ತೆರವು ಗೊಂದಲಗಳ ಕುರಿತು ಸೆಪ್ಟೆಂಬರ್ 18ರ ಸಚಿವ ಸಂಪುಟ ಸಭೆಗೆ ಮಾಹಿತಿ ನೀಡಲಾಗುವುದು ಎಂದು ವಿವರಿಸಿದರು. ಇದೇ ವೇಳೆ ಜಿಲ್ಲಾ ಪಂಚಾಯತ್ ಸಿಇಒ ಡಾ. ದಿಲೀಷ್ ಶಶಿ ಮಾತನಾಡಿ, ಸಾರ್ವಜನಿಕರ ಸಲಹೆಗಳು ಮುಂದಿನ ಅಭಿವೃದ್ಧಿ ಯೋಜನೆ ರೂಪಿಸಲು ನೆರವಾಗಲಿವೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಮಾತನಾಡಿ, ‘ಮನೆಮನೆಗೆ ಪೊಲೀಸ್’ ಹಾಗೂ ಹಿರಿಯ ನಾಗರಿಕರಿಗಾಗಿ ‘ಆಸರೆ’ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದ್ದು, ಸಾರ್ವಜನಿಕರು ಆನ್‌ಲೈನ್ ವಂಚನೆಗಳ ಬಗ್ಗೆ ಜಾಗೃತರಾಗಿರಬೇಕು ಮತ್ತು ಯುವಜನರು ಮಾದಕ ವಸ್ತುಗಳಿಂದ ದೂರವಿರಬೇಕು ಎಂದು ಎಚ್ಚರಿಸಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಎಚ್. ಸೂರ್ಯವಂಶಿ ಅವರು ವನ್ಯಜೀವಿಗಳ ಹಾವಳಿ ತಡೆಗೆ ಕಂದಕ ನಿರ್ಮಾಣ ಮತ್ತು ಸೋಲಾರ್ ಬೇಲಿ ಅಳವಡಿಕೆಯ ಭರವಸೆ ನೀಡಿದರು. ಸಭೆಯಲ್ಲಿ ರಸ್ತೆ ದುರಸ್ತಿ, ವಸತಿ ಯೋಜನೆ, ಅಪಾಯಕಾರಿ ಮರಗಳ ತೆರವು, ಕಂದಾಯ ದಾಖಲೆ ತಿದ್ದುಪಡಿ ಹಾಗೂ ಪಡಿತರ ಚೀಟಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ 600ಕ್ಕೂ ಅಧಿಕ ಅಹವಾಲುಗಳು ಸ್ವೀಕೃತವಾದವು.

ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಫಲಾನುಭವಿಗಳಿಗೆ ಸವಲತ್ತುಗಳು ಹಾಗೂ ಜಾಬ್ ಕಾರ್ಡ್‌ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಕೆ. ಜಿ. ನಾಗರಾಜ, ಉಪವಿಭಾಗಾಧಿಕಾರಿ ಚಂದ್ರಶೇಖರ್ ಆರ್. ಜಿ., ತಾ.ಪಂ. ಇಒ ದೇವರಾಜ ಎಂ. ಹಿತ್ತಲಕೊಪ್ಪ, ತಹಸೀಲ್ದಾರ್ ಮಂಜುಳಾ ನಾಯಕ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250