ಕಾರವಾರ: ಮಕ್ಕಳನ್ನು ದುಡಿಮೆಗೆ ಬಳಸುವ ಬಾಲಕಾರ್ಮಿಕ ಪದ್ಧತಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸರು ಶನಿವಾರ ಜಿಲ್ಲೆಯಾದ್ಯಂತ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಿದರು. ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಅವರಿಗೆ ಸುರಕ್ಷಿತ, ಶೋಷಣೆಮುಕ್ತ ವಾತಾವರಣ ಕಲ್ಪಿಸುವ ಉದ್ದೇಶದಿಂದ ನಡೆದ ಈ ಕಾರ್ಯಾಚರಣೆಯಲ್ಲಿ ಜಿಲ್ಲೆಯ ವಿವಿಧೆಡೆ ವ್ಯಾಪಕ ಪರಿಶೀಲನೆ ನಡೆಸಲಾಯಿತು.

ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಯಿತು. ಬಾಲಕಾರ್ಮಿಕರನ್ನು ಕೆಲಸಕ್ಕೆ ಬಳಸಿಕೊಳ್ಳುವ ಸಾಧ್ಯತೆ ಇರುವ ವಾಣಿಜ್ಯ ಸಂಸ್ಥೆಗಳು, ಅಂಗಡಿಗಳು, ಹೋಟೆಲ್ಗಳು, ಗ್ಯಾರೇಜ್ಗಳು, ವರ್ಕ್ಶಾಪ್ಗಳು ಸೇರಿದಂತೆ ವಿವಿಧ ಸ್ಥಳಗಳಿಗೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಲ್ಲೆಯಾದ್ಯಂತ ಒಟ್ಟು 282 ಸ್ಥಳಗಳನ್ನು ತಪಾಸಣೆ ನಡೆಸಲಾಗಿದ್ದು, ಮಕ್ಕಳನ್ನು ಕಾನೂನುಬಾಹಿರವಾಗಿ ಕೆಲಸಕ್ಕೆ ನೇಮಿಸಿಕೊಂಡಿರುವ ಪ್ರಕರಣಗಳಿವೆಯೇ, ಮಕ್ಕಳ ಹಕ್ಕುಗಳ ಉಲ್ಲಂಘನೆ ಅಥವಾ ಯಾವುದೇ ರೀತಿಯ ಶೋಷಣೆ ನಡೆಯುತ್ತಿದೆಯೇ ಎಂಬುದರ ಕುರಿತು ಪರಿಶೀಲಿಸಲಾಯಿತು. ತಪಾಸಣೆಯ ವೇಳೆ ಬಾಲಕಾರ್ಮಿಕರಿಗೆ ಸಂಬಂಧಿಸಿದ ಯಾವುದೇ ಪ್ರಕರಣ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮಕ್ಕಳನ್ನು ಯಾವುದೇ ರೀತಿಯ ದುಡಿಮೆಗೆ ಬಳಸಿಕೊಳ್ಳದಂತೆ ವ್ಯಾಪಾರಸ್ಥರು, ಉದ್ಯಮಿಗಳು ಹಾಗೂ ಸಾರ್ವಜನಿಕರಿಗೆ ಪೊಲೀಸರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ಕಾನೂನುಬಾಹಿರವಾಗಿದ್ದು, ಇಂತಹ ಪ್ರಕರಣಗಳು ಕಂಡುಬಂದರೆ ಸಾರ್ವಜನಿಕರು ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.
ಬಾಲಕಾರ್ಮಿಕ ಪದ್ಧತಿ ಕಂಡುಬಂದಲ್ಲಿ 112 ಪೊಲೀಸ್ ತುರ್ತು ಸಹಾಯವಾಣಿ ಅಥವಾ 1098 ಮಕ್ಕಳ ಸಹಾಯವಾಣಿ ಮೂಲಕ ಮಾಹಿತಿ ನೀಡಬಹುದಾಗಿದೆ. ಮಕ್ಕಳ ಭವಿಷ್ಯವನ್ನು ಕಾಪಾಡುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಬಾಲಕಾರ್ಮಿಕ ಪದ್ಧತಿಗೆ ಸಂಪೂರ್ಣ ಕಡಿವಾಣ ಹಾಕಲು ಸಾರ್ವಜನಿಕರು ಪೊಲೀಸರೊಂದಿಗೆ ಕೈಜೋಡಿಸುವಂತೆ ಜಿಲ್ಲಾ ಪೊಲೀಸರು ಮನವಿ ಮಾಡಿದ್ದಾರೆ.
