ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Uttara-Kannada

​ಜೈ ದುರ್ಗಾ ಮಾತಾ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘದ ಶಿರಸಿ ಶಾಖೆ ಸೀಜ್: ₹54 ಕೋಟಿ ವಂಚನೆ ಆರೋಪದ ಹಿನ್ನೆಲೆ ಕಂದಾಯ ಇಲಾಖೆ ಕ್ರಮ

Pakka News Web • 18 ಜೂನ್ 2026,

ಶಿರಸಿ:ನಗರದ ಪ್ರಮುಖ ವೃತ್ತವಾದ ಅಶ್ವಿನಿ ಸರ್ಕಲ್‌ನ ಬೆಳ್ಳಿಮನೆ ಕಾಂಪ್ಲೆಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜೈ ದುರ್ಗಾ ಮಾತಾ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘದ ಶಾಖೆಯನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಗುರುವಾರ ಅಧಿಕೃತವಾಗಿ ಸೀಜ್ ಮಾಡಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕಾರವಾರದ ಸದಾಶಿವಗಡದಲ್ಲಿ ಮುಖ್ಯ ಕಚೇರಿ ಹೊಂದಿರುವ ಈ ಸಹಕಾರ ಸಂಘದಲ್ಲಿ ಸುಮಾರು ₹54 ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತದ ಬೃಹತ್ ವಂಚನೆ ನಡೆದಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿರುವ ಬೆನ್ನಲ್ಲೇ ಈ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗಿದೆ. ಸದ್ಯ ಸೀಜ್ ಆಗಿರುವ ಶಿರಸಿ ಶಾಖೆಯೊಂದರಲ್ಲೇ ಸಾರ್ವಜನಿಕರು ಸರಿಸುಮಾರು ₹2.5 ಕೋಟಿ ರೂಪಾಯಿಗಳಷ್ಟು ಹಣವನ್ನು ಠೇವಣಿ ಇಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ.

​ಕಾರವಾರ ಉಪ ವಿಭಾಗಾಧಿಕಾರಿಗಳ ಕಟ್ಟುನಿಟ್ಟಿನ ಆದೇಶದ ಮೇರೆಗೆ ಕಾರ್ಯಾಚರಣೆಗೆ ಇಳಿದ ಶಿರಸಿ ತಹಶೀಲ್ದಾರ್ ಪಟ್ಟರಾಜ ಗೌಡ ಅವರು, ತಮ್ಮ ಸಿಬ್ಬಂದಿ ವರ್ಗದೊಂದಿಗೆ ಸ್ಥಳಕ್ಕೆ ಧಾವಿಸಿ ಶಾಖೆಯ ಕಚೇರಿಯಲ್ಲಿ ಕಾನೂನುಬದ್ಧವಾಗಿ ಪಂಚನಾಮೆ ಪ್ರಕ್ರಿಯೆಗಳನ್ನು ನಡೆಸಿದರು. ತದನಂತರ ಕಚೇರಿಗೆ ಬೀಗ ಮುದ್ರೆ (ಸೀಜ್) ಹಾಕಿ ಕಂದಾಯ ಇಲಾಖೆಯ ಸುಪರ್ದಿಗೆ ತಗೆದುಕೊಂಡರು. ಸದ್ಯ ಸಹಕಾರ ಸಂಘದ ಆರ್ಥಿಕ ವ್ಯವಹಾರಗಳು ಹಾಗೂ ಸಾರ್ವಜನಿಕರ ಠೇವಣಿ ಹಣದ ದುರುಪಯೋಗದ ಕುರಿತು ಸಂಬಂಧಪಟ್ಟ ಇಲಾಖೆಗಳು ಆಳವಾದ ತನಿಖೆಯನ್ನು ಮುಂದುವರಿಸಿದ್ದು, ಮುಂದಿನ ಕಾನೂನು ಕ್ರಮಗಳ ಕುರಿತು ಹಿರಿಯ ಅಧಿಕಾರಿಗಳು ಶೀಘ್ರದಲ್ಲೇ ಹೆಚ್ಚಿನ ಮಾಹಿತಿ ನೀಡುವ ನಿರೀಕ್ಷೆಯಿದೆ.

​ಇನ್ನೊಂದೆಡೆ, ಸಹಕಾರ ಸಂಘದ ಈ ದಿಢೀರ್ ಬೆಳವಣಿಗೆಯಿಂದಾಗಿ ತಮ್ಮ ಕಷ್ಟದ ಹಣವನ್ನು ಹೂಡಿಕೆ ಮಾಡಿದ್ದ ಠೇವಣಿದಾರರಲ್ಲಿ ತೀವ್ರ ಆತಂಕ ಮನೆ ಮಾಡಿದೆ. ತಮ್ಮ ಜೀವಮಾನದ ಉಳಿತಾಯದ ಭದ್ರತೆ ಮತ್ತು ಮರುಪಾವತಿಯ ಕುರಿತು ಆತಂಕಗೊಂಡಿರುವ ಗ್ರಾಹಕರು, ಸರ್ಕಾರ ಹಾಗೂ ಉನ್ನತ ಅಧಿಕಾರಿಗಳು ತಕ್ಷಣವೇ ಮಧ್ಯಪ್ರವೇಶಿಸಿ ತಮಗೆ ನ್ಯಾಯ ಒದಗಿಸಬೇಕೆಂದು ಮತ್ತು ಹಣ ಮರುಪಾವತಿಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತೀವ್ರವಾಗಿ ಆಗ್ರಹಿಸಿದ್ದಾರೆ.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250