ಶಿರಸಿ ತಾಲೂಕಿನ ಕಲ್ಲಳ್ಳಿಮನೆಯ ಜೇನು ಕೃಷಿಕ ಮಧುಕೇಶ್ವರ ಹೆಗಡೆ ಅವರು ನವದೆಹಲಿಯಲ್ಲಿ ನಡೆಯುತ್ತಿರುವ 10ನೇ ರಾಷ್ಟ್ರೀಯ ಅಗ್ರಿವಿಷನ್–2026 ಸಮಾವೇಶದಲ್ಲಿ ಭಾಗವಹಿಸಿ, ತಮ್ಮ ಜೇನು ಕೃಷಿಯ ಯಶೋಗಾಥೆಯನ್ನು ಹಂಚಿಕೊಂಡರು.
ಅಕ್ಟೋಬರ್ 13 ಮತ್ತು 14ರಂದು ICAR–NASC ಆವರಣದಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ದೇಶದ ಆಯ್ದ ನಾಲ್ವರು ಮಾದರಿ ಕೃಷಿಕರಲ್ಲಿ ಒಬ್ಬರಾಗಿ ಅವರು ಪಾಲ್ಗೊಂಡಿದ್ದಾರೆ. ಜೇನು ಕೃಷಿಯಲ್ಲಿ ಎದುರಿಸಿದ ಸವಾಲುಗಳು, ಉದ್ಯಮಶೀಲತೆ ಹಾಗೂ ಸ್ವಾವಲಂಬನೆಯ ಸಾಧ್ಯತೆಗಳ ಕುರಿತು ಅನುಭವ ಹಂಚಿಕೊಂಡರು.

ಸ್ಥಳೀಯ ಸಂಪನ್ಮೂಲಗಳ ಸದ್ಬಳಕೆ, ಆಧುನಿಕ ತಂತ್ರಜ್ಞಾನ ಮತ್ತು ವೈಜ್ಞಾನಿಕ ಪದ್ಧತಿಗಳ ಮೂಲಕ ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿ ರೂಪಿಸಬಹುದು. ಯುವಜನರು ಕೃಷಿಯಲ್ಲಿಯೇ ಹೊಸ ಅವಕಾಶಗಳನ್ನು ಕಂಡುಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಪ್ರಧಾನಮಂತ್ರಿಯವರ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಶ್ಲಾಘನೆಗೆ ಪಾತ್ರರಾಗಿದ್ದ ಮಧುಕೇಶ್ವರ ಹೆಗಡೆ ಅವರ ಸಾಧನೆ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ.
ಉತ್ತರ ಕನ್ನಡದ ಗ್ರಾಮೀಣ ಪರಿಸರದಲ್ಲಿ ಜೇನು ಕೃಷಿಯ ಮೂಲಕ ಸಾಧನೆಯ ಹಾದಿ ಕಂಡುಕೊಂಡಿರುವ ಅವರ ಅನುಭವವು, ಕೃಷಿಯಲ್ಲಿ ಹೊಸ ಅವಕಾಶಗಳನ್ನು ಹುಡುಕುತ್ತಿರುವ ಯುವಜನರಿಗೆ ಹಾಗೂ ಕೃಷಿಕರಿಗೆ ಪ್ರೇರಣೆಯಾಗುವಂತಿದೆ.
